ಮಂಗಳೂರು: ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ದ.ಕ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳೂರಿಗೆ ಆಗಮಿಸಿದ್ದು, ಬಿಜೆಪಿ ಕಾರ್ಯಕರ್ತರು ಕಂಕನಾಡಿ ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಿದರು.
ಕೇರಳದಲ್ಲಿ ಕೋರ್ ಕಮಿಟಿ ಮೀಟಿಂಗ್ನಲ್ಲಿ ಭಾಗವಹಿಸಿದ್ದ ಅವರು ಇಂದು ಬೆಳಗ್ಗೆ 5.30ರ ಸುಮಾರಿಗೆ ಕಂಕನಾಡಿ ರೈಲ್ವೆ ಜಂಕ್ಷನ್ನಲ್ಲಿ ಆಗಮಿಸಿದ ಸಂದರ್ಭ ನೂರಾರು ಬಿಜೆಪಿ ಕಾರ್ಯಕರ್ತರು ರೈಲ್ವೆ ನಿಲ್ದಾಣದಲ್ಲಿ ಹಾಜರಿದ್ದು ಸ್ವಾಗತ ಕೋರಿದರು.
ಈ ಸಂದರ್ಭ ಮಾತನಾಡಿದ ನಳಿನ್ ಕುಮಾರ್, ನಾನು ಸಂಘದ ಹಿನ್ನೆಲೆ ವೈಚಾರಿಕ ಸಿದ್ಧಾಂತದ ಆಧಾರದಲ್ಲಿ ಬಂದವನು. ಸಂಘ ನಮಗೆ ಕಲಿಸಿದ್ದು ಸಂಘಟನೆಯ ಕಾರ್ಯ ಮಾತ್ರ. ಕೆಲಸ ಮಾಡುತ್ತಿದ್ದೆ. ಆದರೆ ಯಾವುದೇ ನಿರೀಕ್ಷೆ ನನ್ನಲ್ಲಿರಲಿಲ್ಲ. ಪರಮವೈಭವ ಸ್ಥಿತಿಗೆ ಕೊಂಡೊಯ್ಯುದಷ್ಟೇ ನನ್ನ ನಿರೀಕ್ಷೆ. ಅದರ ಮಧ್ಯೆ ಪಕ್ಷ ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ ಕೊಡುತ್ತದೆ. ಆ ಜವಾಬ್ದಾರಿಯನ್ನು ನಿನ್ನೆ ಕೊಟ್ಟಿದ್ದಾರೆ. ಎಲ್ಲಾ ಹಿರಿಯ ಮತ್ತು ಕಿರಿಯರ ಮಾರ್ಗದರ್ಶನದಲ್ಲಿ ಸಂಘಟನೆಯ ಕಾರ್ಯವನ್ನು ಪಕ್ಷ ಬಲವರ್ಧನೆಗೆ ಮಾಡುತ್ತೇನೆಂಬ ವಿಶ್ವಾಸವಿದೆ ಎಂದು ಹೇಳಿದರು.
ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದಗೌಡ, ಈಶ್ವರಪ್ಪ ಹಾಗೂ ಪ್ರಹ್ಲಾದ್ ಜೋಶಿಯವರಂತಹ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷ ಬಲವರ್ಧನೆ ಮಾಡುವಂತಹ ಶಕ್ತಿ ಬರುತ್ತದೆ ಎಂಬ ವಿಶ್ವಾಸವಿದೆ ಎಂದು ಈ ವೇಳೆ ಹೇಳಿದರು.
ಇನ್ನು ಕರಾವಳಿಗೆ ಮಹತ್ತರವಾದ ಯೋಜನೆಗಳು ಬರಬಹುದೇ ಎಂಬ ಪ್ರಶ್ನೆಗೆ ನಳಿನ್ ಕುಮಾರ್ ಪ್ರತಿಕ್ರಿಯಿಸಿ, ಈಗ ತಾನೇ ರಾಜ್ಯಾಧ್ಯಕ್ಷನಾಗಿದ್ದೇನೆ. ಯೋಚನೆ ಮಾಡುತ್ತೇವೆ. ಈಗ ನಮಗೆ ಪ್ರಮುಖವಾಗಿ ಸಂಘಟನೆಯ ಕಾರ್ಯಕ್ಕೆ ಈ ಜವಾಬ್ದಾರಿ ನೀಡಿದ್ದಾರೆ ಎಂದು ಹೇಳಿದರು.