ಮಂಗಳೂರು: ಘನತ್ಯಾಜ್ಯ ರಾಶಿ ಕುಸಿತಗೊಂಡ ನಗರದ ಪಚ್ಚನಾಡಿ, ಮಂದಾರ ಪ್ರದೇಶಗಳಿಗೆ ಆರೋಗ್ಯ ಸಚಿವ ಶ್ರೀರಾಮುಲು ಭೇಟಿ ನೀಡಿ, ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಇದೇ ವೇಳೆ ಮಾತನಾಡಿದ ಶ್ರೀರಾಮುಲು, ಪಚ್ಚನಾಡಿಯ ಘನತ್ಯಾಜ್ಯ ಘಟಕ ಕುಸಿತಗೊಂಡಿರುವುದರಿಂದ ಮಂದಾರ ಪ್ರದೇಶದ ಜನರಿಗೆ ಬಹಳಷ್ಟು ತೊಂದರೆಯಾಗಿದೆ. ಇದರ ಬಗ್ಗೆ ಮುಖ್ಯಮಂತ್ರಿಯವರ ಜೊತೆಯಲ್ಲಿ ಮಾತನಾಡುತ್ತೇನೆ. ಜಿಲ್ಲಾ ಆರೋಗ್ಯಾಧಿಕಾರಿಯವರಲ್ಲಿ ವರದಿಯೊಂದನ್ನು ನೀಡಬೇಕೆಂದು ನಾನು ಹೇಳಿದ್ದು, ಬಳಿಕ ಆ ಸಲುವಾಗಿ ಪ್ಯಾಕೇಜೊಂದನ್ನು ಮಾಡಬೇಕಾಗಿದೆ. ಕಸದ ರಾಶಿ ಬೃಹತ್ ಮಟ್ಟದ್ದಿದೆ. ಆದರೆ ಕಸ ವಿಲೇವಾರಿ ಮಾಡವ ಯಂತ್ರದ ಸಾಮರ್ಥ್ಯ 100 ಸಿಸಿ ಇದ್ದು, ಇದು ಬಹಳ ಕಡಿಮೆಯಾಗಿದೆ. ಆದ್ದರಿಂದ 400-500 ಸಿಸಿ ಸಾಮರ್ಥ್ಯದ ಯಂತ್ರದ ಅವಶ್ಯಕತೆ ಇದೆ. ಇದೆಲ್ಲದರ ಬಗ್ಗೆ ಮುಖ್ಯಮಂತ್ರಿಯವರಿಗೆ ಈ ಬಗ್ಗೆ ತಿಳಿಸುತ್ತೇನೆ. ತಕ್ಷಣಕ್ಕೆ ನಮ್ಮಿಂದೇನು ಪರಿಹಾರ ಆಗಬೇಕೋ ಅದನ್ನು ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ.
ಸಾಂಕ್ರಾಮಿಕ ರೋಗ ಬಾರದ ಹಾಗೆ ಮುಂಜಾಗ್ರತಾ ಕ್ರಮವಾಗಿ ಏನು ಕ್ರಮ ಕೈಗೊಳಬೇಕೋ, ಅದೆಲ್ಲವನ್ನು ಮಾಡುತ್ತೇನೆ. ಜೊತೆಗೆ ಇಲ್ಲಿಯೇ ಒಂದು ಆರೋಗ್ಯ ಕೇಂದ್ರ ನಿರ್ಮಾಣ ಮಾಡಿ, ಇಲ್ಲಿನ ನಿವಾಸಿಗಳಿಗೆ ಯಾವುದೇ ತೊಂದರೆಗಳು ಆಗದ ರೀತಿಯಲ್ಲಿ ತಪಾಸಣೆ ನಡೆಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡುತ್ತೇನೆ ಎಂದು ಶ್ರೀರಾಮುಲು ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ, ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್, ಮನಪಾದ ಗಾಯತ್ರಿ ನಾಯಕ್, ಮಧು ಎಸ್. ಮನೋಹರ್ ಮತ್ತಿತರರು ಉಪಸ್ಥಿತರಿದ್ದರು.