ಮಂಗಳೂರು: ಇತ್ತೀಚೆಗೆ ಕೃಷ್ಣೈಕ್ಯರಾದ ಶತಮಾನದ ಸಂತ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗೆ ವಿಶ್ವ ಹಿಂದೂ ಪರಿಷತ್ ನಿಂದ ಇಂದು ಸಂಜೆ ಸಂಘನಿಕೇತನದಲ್ಲಿ 'ಗುರುಸ್ಮರಣೆ' ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಪೇಜಾವರ ಶ್ರೀಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಬಂದದ್ದೆಲ್ಲವನ್ನು ಸಮಾಜಕ್ಕೆ ಅರ್ಪಣೆ ಮಾಡಿ, ಸಮಾಜದ ಜೊತೆ ಬದುಕಿದವರು ಮಾತ್ರ ನಕ್ಷತ್ರಗಳಾಗುತ್ತಾರೆ. ಹಾಗಾಗಿ ಪೇಜಾವರ ಶ್ರೀಗಳು ಆಧ್ಯಾತ್ಮ ಲೋಕದ ನಕ್ಷತ್ರವಾಗಿ ಮೆರೆಯುತ್ತಿದ್ದಾರೆ. ರಾಮಕುಂಜದ ಕುಗ್ರಾಮದಲ್ಲಿ ಹುಟ್ಟಿದ ಇವರು ಸನ್ಯಾಸ ಧರ್ಮವನ್ನು ಸ್ವೀಕರಿಸಿ ವಿಶ್ವದ ಗುರುವಾದರು. ಸಂತ, ಕ್ರಾಂತಿಕಾರಿ, ಸಮಾಜ ಸುಧಾರಕ, ಎಡ - ಬಲ ಎರಡೂ ವಿಚಾರಧಾರಿ, ಎಡಪಂಥೀಯ ಚಿಂತಕರನ್ನೂ ತನ್ನತ್ತ ಸೆಳೆದವರು. ಹಾಗಾಗಿ ಅವರು ವಿಶ್ವಗುರುವಾದರು ಎಂದು ಹೇಳಿದರು.
ಈ ದೇಶದಲ್ಲಿ ವಿಚಾರಗಳನ್ನು ಚರ್ಚೆಗೆ ಬಿಡುವುದರಲ್ಲಿ ವಿಶ್ವೇಶ ತೀರ್ಥರಷ್ಟು ದೊಡ್ಡ ವ್ಯಕ್ತಿ ಮತ್ತೊಬ್ಬನಿರಲಿಲ್ಲ. ಚರ್ಚೆಯನ್ನು ಸಮರ್ಥವಾಗಿ ಎದುರಿಸಿ ಉತ್ತರ ಕೊಡಬಲ್ಲ ಸಂತನೂ ಅವರೇ ಆಗಿದ್ದರು. ಪ್ರಕೃತಿಯ ಹೋರಾಟ ಒಂದೆಡೆಯಾದರೆ, ಹಿಂದುತ್ವದ ಹೋರಾಟ ಇನ್ನೊಂದೆಡೆ. ಎಲ್ಲಿಯೇ ಹಿಂದುತ್ವಕ್ಕೆ ಅನ್ಯಾಯವಾದಾಗ ಮೊದಲು ಹೋಗಿ ಅದರ ವಿರುದ್ಧ ಧ್ವನಿ ಎತ್ತಿದವರು ಪೇಜಾವರ ಶ್ರೀಗಳು. ಅಲ್ಲದೇ ಅಸ್ಪೃಶ್ಯತೆ ನಿವಾರಣೆಗಾಗಿ ಮೊದಲ ಬಾರಿಗೆ ಮಠದಿಂದ ಹೊರ ಬಂದಿದ್ದರು. ಈ ಮೂಲಕ ಎಲ್ಲ ಮಠಾಧೀಶರಿಗೂ ಮಾರ್ಗದರ್ಶಕರಾದರು. ಮೊದಲ ಬಾರಿಗೆ ಮುಸಲ್ಮಾನರನ್ನು ಮಠಕ್ಕೆ ಕರೆದು ಅವರಿಗೂ ಅವಕಾಶ ನೀಡಿ ಹಿಂದೂ ಸಮಾಜವನ್ನು ಪೂಜಿಸುತ್ತೇನೆ. ಇನ್ನೊಂದು ಸಮಾಜವನ್ನು ಗೌರವಿಸುತ್ತೇನೆ ಎಂಬ ಹೃದಯ ವೈಶಾಲ್ಯತೆ ಅವರಲ್ಲಿತ್ತು. ಈ ರೀತಿಯ ಕಾಳಜಿಯಿಂದ ಒಬ್ಬ ಸಂತ ಹೇಗಿರಬೇಕು ಎಂಬುದಕ್ಕೆ ಅವರು ನಿದರ್ಶಕರಾಗಿದ್ದರು ಎಂದರು.