ಮಂಗಳೂರು (ದಕ್ಷಿಣ ಕನ್ನಡ) : ಮಂಗಳೂರಿನ ಕುಖ್ಯಾತ ಕ್ರಿಮಿನಲ್ಗಳಾಗಿರುವ ಪಿಂಕಿ ನವಾಜ್ ಮತ್ತು ಆಕಾಶ ಭವನ ಶರಣ್ ಮೇಲೆ ಮಂಗಳೂರು ನಗರ ಪೊಲೀಸರು ಹಾಕಿರುವ ಗೂಂಡಾ ಕಾಯ್ದೆಗೆ ಹೈಕೋರ್ಟ್ ಸಮ್ಮತಿ ಸೂಚಿಸಿದೆ. ಕುಖ್ಯಾತ ಕ್ರಿಮಿನಲ್ ಪಿಂಕಿ ನವಾಜ್ ಬೆಂಗಳೂರು ಜೈಲಿನಲ್ಲಿದ್ದು, ಆಕಾಶಭವನ ಶರಣ್ ವಿಜಯಪುರ ಜೈಲಿನಲ್ಲಿದ್ದಾನೆ.
ಹತ್ಯೆ, ಕೊಲೆ ಯತ್ನ, ದರೋಡೆ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪಿಂಕಿ ನವಾಜ್ ಮತ್ತು ಆಕಾಶಭವನ ಶರಣ್‌ನನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದರು. ಈ ಇಬ್ಬರ ಮೇಲೆ ಗೂಂಡಾ ಕಾಯ್ದೆ ಹಾಕುವ ಪ್ರಸ್ತಾವನೆಯನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಡಿದ್ದರು. ಗೂಂಡಾ ಕಾಯ್ದೆ ಪ್ರಸ್ತಾವನೆಗೆ ದಾಖಲೆಗಳನ್ನು ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್, ಎಸಿಪಿಗಳಾದ ಮಹೇಶ್ ಕುಮಾರ್, ರವೀಶ್, ಇನ್ಸ್ಪೆಕ್ಟರ್ಗಳಾದ ರಾಘವ ಪಡೀಲ್, ಚಂದ್ರಪ್ಪ ಮೊದಲಾದ ಅಧಿಕಾರಿಗಳ ತಂಡ ಸಿದ್ಧಪಡಿಸಿತ್ತು.
ಇದನ್ನೂ ಓದಿ: ಮದುವೆ ಸಮಾರಂಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಮಾಜಿ ಸೈನಿಕ.. ಆತಂಕಕ್ಕೊಳಗಾದ ಜನ!
ಬಳಿಕ ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಹಾಕುವಂತೆ ರಾಜ್ಯ ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿತ್ತು. ಅದಕ್ಕೀಗ ರಾಜ್ಯ ಹೈಕೋರ್ಟ್ ಒಪ್ಪಿಗೆ ನೀಡಿದೆ. ಗೂಂಡಾ ಕಾಯ್ದೆಗೆ ಒಪ್ಪಿಗೆ ಸಿಕ್ಕ ಬಳಿಕ ಇಬ್ಬರನ್ನು ಒಂದು ವರ್ಷದವರೆಗೆ ನ್ಯಾಯಾಂಗ ಬಂಧನದಲ್ಲಿಯೇ ಇರಿಸುವಂತೆ ರಾಜ್ಯ ಗೃಹ ಇಲಾಖೆ ಆದೇಶಿಸಿದೆ. ಗೂಂಡಾ ಕಾಯ್ದೆ ಜಾರಿ ಮಾಡಲು ಆರೋಪಿಗಳಿಬ್ಬರ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆ ದಾಖಲೆ ಸಂಗ್ರಹಿಸಿದ್ದ ಪೊಲೀಸರ ತಂಡಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು 1 ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದಾರೆ.