ಮಂಗಳೂರು: ಕಂಪನಿಯೊಂದರಲ್ಲಿ ಡಿಸ್ಟ್ರಿಬ್ಯೂಟರ್ ಕೆಲಸ ನೀಡುವುದಾಗಿ ಹೇಳಿ ನೂರಕ್ಕೂ ಅಧಿಕ ಮಂದಿಯಿಂದ 20 ಲಕ್ಷ ರೂ ವಂಚನೆ ಮಾಡಿದ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾವೂರಿನ ದೇರೆಬೈಲ್ ಎಂಬಲ್ಲಿರುವ ICANIVO TYRENTS MART PVT LTD ಕಂಪನಿ ವಂಚನೆ ಎಸಗಿದ ಬಗ್ಗೆ ಪ್ರಕರಣ ದಾಖಲಾಗಿದೆ. ಈ ಸಂಸ್ಥೆ ಡಿಸ್ಟ್ರಿಬ್ಯೂಟರ್ ಬೇಕೆಂದು ತಿಳಿಸಿ ನೂರಕ್ಕೂ ಅಧಿಕ ಮಂದಿಯಿಂದ ಬೇರೆ ಬೇರೆ ಮೌಲ್ಯದ ಹಣವನ್ನು ಸಂಗ್ರಹಿಸಿದೆ. ಕೆಲಸ ನೀಡದೇ ಇದ್ದಾಗ ಈ ಹಣವನ್ನು ವಾಪಸು ನೀಡುವಂತೆ ಹಣ ನೀಡಿದವರು ಕೇಳಿದ್ದಾರೆ.
ಕಂಪನಿಯ ಡಿಸ್ಟ್ರಿಬ್ಯೂಟರ್ ಹುದ್ದೆಯಲ್ಲಿರುವ ಅನಿತಾ, ನವ್ಯ ಮತ್ತು ಮಂಗಳೂರಿನ ಕಚೇರಿಯನ್ನು ನೋಡಿಕೊಳ್ಳುತ್ತಿರುವ ಸುಜನ್ ನಾಯಕ್, ಸಚಿನ್ ನಾಯ್ಕ್, ಪ್ರಹ್ಲಾದ, ಅಭಿಷೇಕ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದಾರೆ ಮತ್ತು ಕಂಪನಿಯ ಮುಖ್ಯಸ್ಥರಾಗಿರುವ ಬಿ ವಿ ಹೇಮಂತ್ ಮೋಸ ಮಾಡಿದ್ದಾರೆ ಎಂದು ನಾಗೇಶ್ ಎಂಬವರು ದೂರು ನೀಡಿದ್ದಾರೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.