ಮಂಗಳೂರು: 1994 ರಲ್ಲಿ ಮಂಗಳೂರನ್ನೆ ಬೆಚ್ಚಿ ಬೀಳಿಸಿದ ವಾಮಂಜೂರಿನ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಅಪರಾಧಿ ಪ್ರವೀಣ್ ಕುಮಾರ್ ಜೈಲಿನಿಂದ ಬಿಡುಗಡೆ ಭಾಗ್ಯ ಸುದ್ದಿ ಸಂತ್ರಸ್ತ ಕುಟುಂಬವನ್ನು ಆತಂಕಕ್ಕೆ ತಳ್ಳಿದ್ದು, ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಪ್ರವೀಣ್ ಕುಮಾರ್ ಬಳ್ಳಾರಿ ಜೈಲಿನಲ್ಲಿದ್ದು, ಸನ್ನಡತೆಯ ಆಧಾರದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ಬಿಡುಗಡೆ ಮಾಡುವ ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಸಂತ್ರಸ್ತ ಕುಟುಂಬಕ್ಕೆ ಮಾಹಿತಿ ಸಿಕ್ಕಿದೆ. ವಾಮಜೂರು ಪ್ರವೀಣ್ ಕಳೆದ 28 ವರ್ಷಗಳಿಂದ ಜೈಲಿನಲ್ಲಿದ್ದು, ಪ್ರಸ್ತುತ ಬಳ್ಳಾರಿ ಜೈಲಿನಲ್ಲಿದ್ದಾನೆ.
ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಸಂತ್ರಸ್ತ ಕುಟುಂಬದ ಸೀತಾರಾಮ ಅವರು ಅಪರಾಧಿ ಪ್ರವೀಣ್ ಕುಮಾರ್ ಬಿಡುಗಡೆ ವಿಚಾರ ತಿಳಿದು ಆತಂಕವಾಗಿದೆ. ಆತನ ಹೆಂಡತಿ ಸೇರಿದಂತೆ ಯಾರಿಗೂ ಆತ ಬಿಡುಗಡೆಯಾಗಿ ಬರುವುದಕ್ಕೆ ವಿರೋಧವಿದೆ. ಈ ಬಗ್ಗೆ ಶೀಘ್ರವೆ ಮಂಗಳೂರು ನಗರ ಪೊಲೀಸ್ ಕಮಿಷನರ್, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಕೊಲೆ ಮಾಡಿ ಆಭರಣಗಳೊಂದಿಗೆ ಪರಾರಿ: ಅಪರಾಧಿ ಪ್ರವೀಣ್ 1994 ಫೆಬ್ರವರಿ 23ರಂದು ವಾಮಂಜೂರಿನ ಸಂಬಂಧಿಕರ ಮನೆಯಲ್ಲಿ ರಾತ್ರಿ ಮಲಗಿದ್ದವನು ಮಧ್ಯರಾತ್ರಿ ಎದ್ದು, ಆತನ ಸಂಬಂಧಿಕರೇ ಆಗಿದ್ದ (ತಂದೆಯ ತಂಗಿ) ಅಪ್ಪಿ ಶೇರಿಗಾರ್ತಿ (75) ಆಕೆಯ ಪುತ್ರಿ ಶಕುಂತಲಾ (36), ಪುತ್ರ ಗೋವಿಂದ (30)ಮೊಮ್ಮಗಳು ದೀಪಿಕಾ(9) ಅವರನ್ನು ಹಾರೆಯ ಹಿಡಿಯಿಂದ ತಲೆಗೆ ಹೊಡೆದು ಕೊಲೆ ಮಾಡಿ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದನು.
ಮೂಲತಃ ಉಪ್ಪಿನಂಗಡಿ ಸಮೀಪದ ಹೆರಿಯಡ್ಕ ನಿವಾಸಿಯಾಗಿದ್ದ ಪ್ರವೀಣ್ ಮಂಗಳೂರಿನ ಚಿಲಿಂಬಿಯಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದನು. ಆಗ ಸಿಂಗಲ್ ನಂಬರ್ ಲಾಟರಿ ನಡೆಯುತ್ತಿದ್ದು, ಈತ ಟಿಕೆಟ್ ಖರೀದಿಯ ಚಟಕ್ಕೆ ಅಂಟಿಕೊಂಡಿದ್ದ. ಇದರಿಂದ ಆತ ಹಣಕಾಸಿನ ಬಿಕ್ಕಟ್ಟಿನಲ್ಲಿದ್ದು, ಪತ್ನಿ ಮತ್ತು ಇತರ ಕುಟುಂಬದ ಸದಸ್ಯರ ಚಿನ್ನಾಭರಣಗಳನ್ನು ಅಡವು ಇರಿಸಿ ಸಾಲವನ್ನೂ ಪಡೆದಿದ್ದನು.
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಅಪರಾಧಿ: ಪರಾರಿಯಾಗಿದ್ದ ಈತನನ್ನು ಕೆಲವೇ ದಿನಗಳಲ್ಲಿ ಪೊಲೀಸರು ಬಂಧಿಸಿ ಚಿನ್ನಾಭರಣಗಳನ್ನು ಆರೋಪಿ ಬಚ್ಚಿಟ್ಟಲ್ಲಿಂದ ವಶಪಡಿಸಿಕೊಂಡಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ವಿಚಾರಣೆಗಾಗಿ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಮಂಗಳೂರು ಜೈಲಿಗೆ ಕರೆತರುತ್ತಿದ್ದಾಗ ಹುಬ್ಬಳ್ಳಿಯ ಕುಂದಗೋಳದ ಹೊಟೇಲ್ನಲ್ಲಿ ಊಟ ಮಾಡುತ್ತಿದ್ದ ವೇಳೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ. ಆರೋಪಿ ಎಲ್ಲಿದ್ದಾನೆಂದು ಸುಳಿವು ನೀಡುವವರಿಗೆ 1 ಲಕ್ಷ ರೂ. ನಗದು ಬಹುಮಾನವನ್ನು ಸಂತ್ರಸ್ತರ ಕುಟುಂಬದವರು ಘೋಷಿಸಿದ್ದರು.
ಪ್ರವೀಣ್ ತಪ್ಪಿಸಿಕೊಂಡು ಗೋವಾಕ್ಕೆ ತೆರಳಿ ಅಲ್ಲಿ ಬೇರೆ ಹೆಸರಿನಲ್ಲಿ ತಲೆಮರೆಸಿಕೊಂಡು ಯುವತಿಯೊಬ್ಬರನ್ನು ಮದುವೆಯಾಗಿದ್ದ. ಅವಳಿಗೆ ಮಗು ಕೂಡ ಆಗಿತ್ತು. ನಾಪತ್ತೆಯಾದ ಆರೋಪಿ ಶೋಧ ಪ್ರಕ್ರಿಯೆಯಲ್ಲಿ 1999ರಲ್ಲಿ ಮಂಗಳೂರಿನ ಇನ್ಸ್‌ಪೆಕ್ಟರ್ ಜಯಂತ್ ಶೆಟ್ಟಿ ನೇತೃತ್ವದ ರೌಡಿ ನಿಗ್ರಹ ದಳ ತಂಡ ಆತನನ್ನು ಪತ್ತೆ ಹಚ್ಚಿ ಬಂಧಿಸಿ ಪುನಃ ಜೈಲಿಗಟ್ಟಿತ್ತು.
ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ಮಂಗಳೂರಿನ ನ್ಯಾಯಾಲಯವು ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ಮಂಗಳೂರು ನ್ಯಾಯಾಲಯ ನೀಡಿದ ತೀರ್ಪನ್ನು ಬಳಿಕ ಹೈಕೋರ್ಟ್ ಮತ್ತು 2003ರಲ್ಲಿ ಸುಪ್ರೀಂ ಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು. ಮರಣ ದಂಡನೆಯ ಶಿಕ್ಷೆಯ ಬಳಿಕ ಆತ ರಾಷ್ಟ್ರಪತಿಯವರಿಗೆ ಕ್ಷಮಾಪಣೆಯ ಅರ್ಜಿಯನ್ನು ಸಲ್ಲಿಸಿದ್ದು, ಈ ಅರ್ಜಿಯನ್ನು 2013 ಏಪ್ರಿಲ್ 4 ರಂದು ರಾಷ್ಟ್ರಪತಿ ತಿರಸ್ಕಾರ ಕೂಡಾ ಮಾಡಿದ್ದರು.
ಆದರೆ, ರಾಜೀವ್ ಗಾಂಧಿಯನ್ನು ಕೊಂದಿದ್ದ ಮೂವರ ಗಲ್ಲು ಶಿಕ್ಷೆ ರದ್ದು ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದದ್ದನ್ನೇ ಆಧಾರವಾಗಿಟ್ಟು ಪ್ರವೀಣ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಆಗ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ 2014 ಜನವರಿ 22 ರಂದು ಪರಿವರ್ತನೆ ಮಾಡಿತ್ತು.
ಇದೀಗ ಸ್ವಾತಂತ್ಯ್ರೋತ್ಸವದ ಅಮೃಮಹೋತ್ಸವದ ಸಂದರ್ಭದಲ್ಲಿ ಸರ್ಕಾರ ಕೆಲವು ಜನ ಕೈದಿಗಳಿಗೆ ಜೈಲಿನಿಂದ ಬಿಡುಗಡೆ ಭಾಗ್ಯವನ್ನು ಕಲ್ಪಿಸುತ್ತಿದ್ದು, ಹೀಗೆ ಬಿಡುಗಡೆಯಾಗುವವರ ಪಟ್ಟಿಯಲ್ಲಿ ವಾಮಂಜೂರು ಪ್ರವೀಣನೂ ಇದ್ದಾನೆ ಎಂಬ ಸುದ್ದಿ ಸಂತ್ರಸ್ತ ಕುಟುಂಬಕ್ಕೆ ತಲುಪಿದೆ. ಕಳೆದ 28 ವರ್ಷಗಳಿಂದ ಜೈಲಿನಲ್ಲಿ ಇರುವ ಆತನನ್ನು ಬಿಡುಗಡೆ ಮಾಡುವ ಬಗ್ಗೆ ಹತ್ಯೆಯಾದ ಅಪ್ಪಿ ಶೇರಿಗಾರ್ತಿ ಪುತ್ರ ಗುರುಪುರದ ಸೀತಾರಾಮ ಅವರು ಆತಂಕ ಹಾಗೂ ಅಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಸುರತ್ಕಲ್ ಫಾಜಿಲ್ ಕೊಲೆ ಪ್ರಕರಣ: ಏಳು ಮಂದಿ ಬಂಧನ