ಮಂಗಳೂರು: ಎಸ್ಎಸ್ಎಲ್ಸಿ ಪಠ್ಯಪುಸ್ತಕದಲ್ಲಿ ನಾರಾಯಣ ಗುರುಗಳ ವಿಷಯವನ್ನು ಕೈಬಿಟ್ಟು ಸರ್ಕಾರ ಅವಮಾನ ಮಾಡಿದೆ ಎಂದು ಮಾಜಿ ಶಾಸಕ , ಕಾಂಗ್ರೆಸ್ ಮುಖಂಡ ಜೆ.ಆರ್.ಲೋಬೋ ಕಿಡಿಕಾರಿದ್ದಾರೆ. ಪಠ್ಯಪುಸ್ತಕದಲ್ಲಿ ನಾರಾಯಣ ಗುರುಗಳ ವಿಷಯವನ್ನು ಕೈಬಿಟ್ಟಿರುವ ಸರ್ಕಾರದ ನಿರ್ಧಾರ ಸರಿಯಲ್ಲ. ಕೂಡಲೇ ಇದನ್ನು ಸರಿಪಡಿಸಿ ಪಠ್ಯಪುಸ್ತಕದಲ್ಲಿ ಸೇರಿಸಬೇಕು. ನಾರಾಯಣ ಗುರುಗಳು, ಬಸವಣ್ಣ, ಪೆರಿಯಾರ್ ಅವರ ವಿಷಯವನ್ನು ಕೈಬಿಟ್ಟಿರುವುದಾಗಿ ತಿಳಿದು ಬಂದಿದೆ. ಇದು ಸರಿಯಾದ ಕ್ರಮವಲ್ಲ, ಈ ಮಹಾನ್ ಪುರುಷರ ಬಗ್ಗೆ ಮಕ್ಕಳಿಗೆ ತಿಳಿಸಬೇಕಾಗಿದೆ ಎಂದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನಾರಾಯಣ ಗುರುಗಳ ಬಗ್ಗೆ ನಿರಂತರ ಅಸಡ್ಡೆ ಮಾಡುತ್ತಿದೆ. ನಾರಾಯಣ ಗುರುಗಳು ಮಂಗಳೂರಿಗೆ ಮೊದಲು ಬಂದಿಳಿದ ಹಿನ್ನೆಲೆಯಲ್ಲಿ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಅವರ ಹೆಸರಿಡುವಂತೆ ಒತ್ತಾಯಿಸಿದ್ದೆವು. ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರುಗಳ ಟ್ಯಾಬ್ಲೋ ತಿರಸ್ಕರಿಸಲಾಯಿತು. ಇದೀಗ ಪಠ್ಯಪುಸ್ತಕದಿಂದ ನಾರಾಯಣ ಗುರುಗಳ ವಿಷಯವನ್ನು ಕೈಬಿಟ್ಟಿದ್ದಾರೆ. ಈ ಮೂಲಕ ಸರ್ಕಾರ ನಿರಂತರ ಅಸಡ್ಡೆ ಮಾಡುತ್ತಿದೆ ಎಂದು ಆಪಾದಿಸಿದರು.
ಇದನ್ನೂ ಓದಿ: ಸವದಿ, ಕತ್ತಿ, ಜಾರಕಿಹೊಳಿ ಬ್ರದರ್ಸ್ ಭಿನ್ನರಾಗ: ನಿರಾಣಿ, ಶಹಾಪುರಗೆ ಹೆಚ್ಚಿದ ಆತಂಕ