ಮಂಗಳೂರು: ನಗರದ ಪಚ್ಚನಾಡಿ ಡಂಪಿಂಗ್ ಯಾರ್ಡ್ ಕುಸಿತಗೊಂಡಿರುವುದಕ್ಕೆ ಮಂಗಳೂರು ಮಹಾನಗರ ಪಾಲಿಕೆ ಎಷ್ಟು ಕಾರಣವೋ, ಹಿಂದಿನ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಕೂಡ ಅಷ್ಟೇ ಕಾರಣ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ದಕ್ಷಿಣ ಕನ್ನಡ ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಪಚ್ಚನಾಡಿ ಡಂಪಿಂಗ್ ಯಾರ್ಡ್ ಕುಸಿತ ಪ್ರಕರಣ ಸಂಬಂಧ ಮಾತನಾಡಿದ ಕಟೀಲ್, ಹಿಂದಿನ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಕಾಲದಲ್ಲಿಯೇ ಈ ಡಂಪಿಂಗ್ ಯಾರ್ಡ್ ಕುಸಿದಿರುವುದು. ಈ ಬಗ್ಗೆ ತನಿಖೆ ಏಕೆ ಮಾಡಿಸಿರಲಿಲ್ಲ ಎಂದು ಪ್ರಶ್ನಿಸಿದರು.
ಬಳಿಕ ಪಾಲಿಕೆ ಎಂಜಿನಿಯರ್ಗಳನ್ನು ತರಾಟೆಗೆ ತೆಗೆದುಕೊಂಡ ಅವರು, ತಿಂಗಳು ಕಳೆದರೂ ಅದರ ಬಗ್ಗೆ ಯಾವುದೇ ಕ್ರಮ ಯಾಕೆ ಕೈಗೊಂಡಿಲ್ಲ? ತನಿಖೆಗೆ ಇನ್ನೆಷ್ಟು ತಿಂಗಳು ಬೇಕು? ನೀವು ಈ ಡಂಪಿಂಗ್ ಯಾರ್ಡ್ ಮುಖಾಂತರ ಎಷ್ಟು ಲಂಚ ಪಡೆಯುತ್ತೀರಿ ಎಂದು ನನಗೆ ತಿಳಿದಿದೆ. ಒಂದು ಸಲ ನಿಮ್ಮ ಬಿಲ್ ಬುಕ್ ತನ್ನಿ, ಅಲ್ಲಿ ಎಷ್ಟು ಯಂತ್ರಗಳು ಕೆಲಸ ಮಾಡುತ್ತವೆ, ದಿವಸಕ್ಕೆ ಎಷ್ಟು ಬಾಡಿಗೆ ವಿಧಿಸುತ್ತೀರಿ ಎಲ್ಲವೂ ತಿಳಿದಿದೆ ಎಂದು ಹೇಳಿದರು.
ಡಂಪಿಂಗ್ ಯಾರ್ಡ್ ಕುಸಿತಗೊಳ್ಳಲು ಯಾರು ಕಾರಣ ಎಂದು ಮೊದಲಿಗೆ ಸ್ಪಷ್ಟವಾಗಬೇಕು. ಹಾಗಾಗಿ ಒಂದು ವಾರದೊಳಗೆ ಇದರ ತನಿಖೆ ನಡೆಸಿ, ಆರೋಪಿಗಳ ಮೇಲೆ ಎಫ್ಐಆರ್ ದಾಖಲಿಸಿ ಎಂದು ಜಿಪಂ ಸಿಇಒಗೆ ತಾಕೀತು ಮಾಡಿದರು.
ಇತ್ತೀಚೆಗೆ ಪಡೀಲ್ ಶಿವನಗರದಲ್ಲಿ ಕಂಪೌಂಡ್ ಕುಸಿದು ಮಕ್ಕಳಿಬ್ಬರು ಮೃತಪಟ್ಟ ಘಟನೆ ಸಂಬಂಧ ಇನ್ನೂ ಎಫ್ಐಆರ್ ದಾಖಲೆ ಮಾಡದೇ ಇರುವುದಕ್ಕೆ ನಳಿನ್ ಕುಮಾರ್, ಅಧಿಕಾರಿಗಳ ಮೇಲೆ ಗರಂ ಆದರು. ಘಟನೆ ನಡೆದು ನಾಲ್ಕು ದಿವಸಗಳಾದರೂ ಇನ್ನೂ ಯಾಕೆ ದೂರು ದಾಖಲಿಸಿಲ್ಲ? ಪಾಲಿಕೆಯವರದು ಹಣ ಮಾಡುವುದು, ಲಂಚ ತೆಗೆದುಕೊಳ್ಳುವುದು, ಜೀವನ ಪೂರ್ತಿ ಇದೇ ಆಗಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆವರಣ ಗೋಡೆಯನ್ನು ನಿರ್ಮಿಸಿದ ಎಂಜಿನಿಯರ್, ಕಂಟ್ರ್ಯಾಕ್ಟರ್ ಹಾಗೂ ಮನೆಯ ಮಾಲೀಕನ ಮೇಲೆ ಎಫ್ಐಆರ್ ದಾಖಲಿಸಿ ಮೂವರನ್ನೂ ಬಂಧಿಸುವಂತೆ ಹೇಳಿದರು.
ಇನ್ನು ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳ ರಸ್ತೆ ಕಾಮಗಾರಿಗಳ ಬಗ್ಗೆ ಚರ್ಚಿಸಿದ ಸಂಸದರಿಗೆ ಅಕ್ಟೋಬರ್ ಒಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದರು.