ಮಂಗಳೂರು: 10-15 ಅಡಿ ಕೊರೆಯಲಾಗಿದ್ದ ಆಳವೊಂದಕ್ಕೆ ಪಾರಿವಾಳ ಬಿದ್ದು ಒದ್ದಾಡುತ್ತಿದ್ದದನ್ನು ಕಂಡ ಪರಿಸರ ಹೋರಾಟಗಾರರೊಬ್ಬರು, ಅಗ್ನಿಶಾಮಕ ದಳವನ್ನೇ ಕರೆಸಿ ಪಾರಿವಾಳವನ್ನು ಪ್ರಾಣಾಪಾಯದಿಂದ ಪಾರು ಮಾಡಿದ ವಿಶೇಷ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ.
ನಗರದ ಟಿಎಂಎ ಪೈ ಸಭಾಂಗಣದ ಮುಂಭಾಗದಲ್ಲಿರುವ ಪ್ರದೇಶದಲ್ಲಿ ಕಾಮಗಾರಿ ಸ್ಥಗಿತಗೊಂಡಿರುವ ಕಟ್ಟಡದ ಪಾರ್ಕಿಂಗ್ ಸ್ಥಳಕ್ಕಾಗಿ ಸಾಕಷ್ಟು ಆಳ ಕೊರೆಯಲಾಗಿತ್ತು. ಅದರಲ್ಲೀಗ ನೀರು ತುಂಬಿದ್ದು, ಭಾರೀ ಗಾತ್ರದ ಮೀನುಗಳೂ ಇವೆಯಂತೆ. ಈ ನೀರಿನ ಹೊಂಡಕ್ಕೆ ಅಕಸ್ಮತ್ತಾಗಿ ಪಾರಿವಾಳವೊಂದು ಬಿದ್ದಿದೆ. ಅಲ್ಲದೇ ಪೂರ್ತಿ ಒದ್ದೆಯಾಗಿರುವ ಈ ಪಾರಿವಾಳ ಮೇಲೆ ಬರಲಾಗದೇ ಒದ್ದಾಡುತ್ತಿತ್ತು. ಈ ಪ್ರದೇಶ ರಸ್ತೆಯ ಬದಿಯಲ್ಲಿದ್ದರೂ, ಮಾರ್ಗದ ಬದಿಗೆ ಎತ್ತರಕ್ಕೆ ತಗಡು ಶೀಟ್ ಅಡ್ಡ ಇಟ್ಟಿರೋದರಿಂದ ಇದು ಯಾರ ಗಮನಕ್ಕೂ ಬಂದಿರಲಿಲ್ಲ.
ಅದೇ ಪ್ರದೇಶದ ಮುಂಭಾಗ ಇರುವ ಫ್ಲ್ಯಾಟೊಂದಕ್ಕೆ ಕಾರ್ಯನಿಮಿತ್ತ ಹೋಗಿರುವ ಪರಿಸರ ಹೋರಾಟಗಾರ ಶಶಿಧರ್ ಶೆಟ್ಟಿ ಈ ದೃಶ್ಯವನ್ನು ನೋಡಿದ್ದಾರೆ. ತಕ್ಷಣ ಅವರು ಪಾಂಡೇಶ್ವರ ಅಗ್ನಿಶಾಮಕ ದಳದವರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ 1.30 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಪಾರಿವಾಳವನ್ನು ರಕ್ಷಿಸಿದ್ದಾರೆ.
ಪೂರ್ತಿ ಒದ್ದೆಯಾಗಿ ಒದ್ದಾಡುತ್ತಿದ್ದ ಪಾರಿವಾಳವನ್ನು ಹಿಂದಿನ ಸ್ಥಿತಿಗೆ ಬರುವವರೆಗೆ ಎನಿಮಲ್ ಕೇರ್ ಟ್ರಸ್ಟ್ನ ತೌಸೀಫ್ ಅವರ ಸುಪರ್ದಿಗೆ ವಹಿಸಲಾಗಿದೆ. ಅಪಾಯದಲ್ಲಿದ್ದ ಪಾರಿವಾಳ ಇದೀಗ ರಕ್ಷಣೆಯಾಗಿದ್ದು, ಪರಿಸರ ಹೋರಾಟಗಾರ ಶಶಿಧರ್ ಶೆಟ್ಟಿ ಹಾಗೂ ಅಗ್ನಿಶಾಮಕ ದಳದ ಕಾರ್ಯ ನಿಜಕ್ಕೂ ಶ್ಲಾಘನೀಯ.