ಬೆಳ್ತಂಗಡಿ : ಕಳೆದ ಮೂರು ವರ್ಷಗಳಿಂದ ಒಂದು ಎಕರೆ ಭೂಮಿಯಲ್ಲಿ ವಿವಿಧ ರೀತಿಯ ತರಕಾರಿಗಳನ್ನು ಸಾವಯವ ಮಾದರಿಯಲ್ಲಿ ಬೆಳೆಸಿ ಅಧಿಕ ಇಳುವರಿಯನ್ನು ಇಲ್ಲೊಬ್ಬ ಕೃಷಿಕ ಪಡೆಯುತಿದ್ದಾರೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಮಲ್ಲರ್ ಮಾಡಿಯ ನಿವಾಸಿ ವೆಂಕಪ್ಪ ಪೂಜಾರಿ ಅವರು ಮೂಲತಃ ಮೇಸ್ತ್ರಿ ಕೆಲಸ ಮಾಡುತ್ತಿದ್ದಾರೆ. ತನ್ನ ಬಿಡುವಿನ ಸಮಯದಲ್ಲಿ ಬೆಂಡೆ, ಸೌತೆಕಾಯಿ, ತೊಂಡೆಕಾಯಿ, ಚೀನಿ ಕಾಯಿ, ಮುಳ್ಳು ಸೌತೆ, ಅಲಸಂಡೆ ಈ ರೀತಿ ಹಲವಾರು ವಿವಿಧ ರೀತಿಯ ತರಕಾರಿಗಳನ್ನು ಬೆಳೆಸುತ್ತಿದ್ದಾರೆ.
ವಾರಕ್ಕೆರಡು, ಇಲ್ಲವೇ ಮೂರು ಬಾರಿ ಸ್ಥಳೀಯ ತರಕಾರಿ ಅಂಗಡಿಗಳಿಗೆ ಹೋಗಿ ಮಾರುತ್ತಾರೆ. ಬೆಳಗ್ಗೆ 5 ಗಂಟೆಗೆ ಎದ್ದು ಕೆಲಸ ಪ್ರಾರಂಭಿಸುವ ಇವರು 9 ಗಂಟೆವರೆಗೆ ತರಕಾರಿ ತೋಟದಲ್ಲಿ ಕಾರ್ಯ ನಿರ್ವಹಿಸಿ ಬಳಿಕ ಮೇಸ್ತ್ರಿ ಕೆಲಸಕ್ಕೆ ಹೋಗುತ್ತಾರೆ. ಇವರಿಗೆ ಮನೆಯವರೂ ಕೂಡ ಸಹಕರಿಸುತ್ತಿದ್ದಾರೆ. ಅಲ್ಲದೇ ಕೆಲ ಪ್ರಾಯೋಗಿಕ ತರಕಾರಿಗಳನ್ನು ಕೂಡ ಬೆಳೆಸಿದ್ದಾರೆ. ಆನ್ಲೈನ್ ಮೂಲಕ 'ಝೂಚ್ಚಿನಿ' ಎಂಬ ಹೆಸರಿನ ಜರ್ಮನ್ ತಳಿಯ ಚೀನಿಕಾಯಿಯ ಬೀಜಗಳನ್ನು ತರಿಸಿ ಇವರು ಬೆಳೆದಿದ್ದಾರೆ.
ಕೃಷಿಕ ವೆಂಕಪ್ಪ ಪೂಜಾರಿ ಪ್ರತಿಕ್ರಿಯೆ : ನಾನು ಕಳೆದ 35 ವರ್ಷಗಳಿಂದ ಮೇಸ್ತ್ರಿ ಕೆಲಸ ಮಾಡಿಕೊಂಡು ಬರುತಿದ್ದೇನೆ. ಕಳೆದ 3 ವರ್ಷಗಳಿಂದ ಸುಮಾರು ಒಂದು ಎಕರೆ ಭತ್ತ ಬೆಳೆಯುವ ಜಾಗದಲ್ಲಿ ಮಿಶ್ರ ಬೆಳೆಯಾಗಿ ತರಕಾರಿ ಬೆಳೆಯುವ ಯೋಚನೆ ಬಂತು. ವರ್ಷದಲ್ಲಿ ಒಂದು ಬಾರಿ ಮಾತ್ರ ಭತ್ತದ ಕೃಷಿ ಮಾಡಿ, ನಂತರ ವಿವಿಧ ಬಗೆಯ ತರಕಾರಿ ಬೀಜಗಳನ್ನು ತರಿಸಿ ಗದ್ದೆಯನ್ನು ಹದ ಮಾಡಿ ಸಂಪೂರ್ಣ ಸಾವಯವ ಮಾದರಿಯಲ್ಲಿ ತರಕಾರಿ ಬೆಳೆಯಲು ಪ್ರಾರಂಭಿಸಿದೆ.
ನಾನು ತರಕಾರಿಯನ್ನು ಲಾಭದ ಉದ್ಧೇಶಕ್ಕಾಗಿ ಮಾಡುವ ಯೋಚನೆ ಮಾಡದೇ ಸಂಪೂರ್ಣ ಸಾವಯವ ಗೊಬ್ಬರಗಳಾದ ಹಟ್ಟಿ ಗೊಬ್ಬರ, ಸಗಣಿ, ಬೂದಿ, ಸುಡು ಮಣ್ಣು ಹಾಕಿ ತರಕಾರಿ ಬೆಳೆಸಿದ್ದೇನೆ. ಇದರಿಂದ ಅಧಿಕ ಇಳುವರಿ ಬಂದಿದ್ದಲ್ಲದೇ ತುಂಬಾ ಬೇಡಿಕೆಯೂ ಬರಲಾರಂಭಿಸಿತು. ಉತ್ತಮ ಗುಣಮಟ್ಟದ ತರಕಾರಿ ಬೆಳೆಸಿದ್ದರಿಂದ ಮನೆಗೆ ಬಂದು ಕೆಲವರು ತರಕಾರಿ ಖರೀದಿಸಿಕೊಂಡು ಹೋಗುತಿದ್ದಾರೆ.
ಸಾವಯವ ಬೆಳೆ ಕೃಷಿಯಿಂದ ಸಮಾಧಾನ : ನನ್ನ ಹೆಂಡತಿ ಹಾಗೂ ಮಗ ನನಗೆ ಬೆಂಬಲವಾಗಿ ಇರುವುದರಿಂದ ಇಷ್ಟೆಲ್ಲಾ ತರಕಾರಿ ಬೆಳೆಯಲು ಕಾರಣವಾಗಿದೆ. ಕಾಡು ಪ್ರಾಣಿಗಳ ಹಾವಳಿ ಅಷ್ಟೇನೂ ಇಲ್ಲದಿದ್ದರೂ ನವಿಲು ಹಾಗೂ ಕೋತಿಗಳ ಉಪಟಳ ಸ್ವಲ್ಪ ಇದೆ. ನನ್ನ ದಿನನಿತ್ಯದ ಜೀವನಕ್ಕೆ ಬೇಕಾದಷ್ಟು ಹಣವನ್ನು ತರಕಾರಿ ಮಾರಿ ಪಡೆಯುತಿದ್ದೇನೆ. ಅದಲ್ಲದೇ ಸಾವಯವ ಮಾದರಿಯಲ್ಲಿ ತರಕಾರಿ ಬೆಳೆಸುತ್ತಿರುವುದರಿಂದ ಮನಸ್ಸಿಗೂ ಸಮಾಧಾನವಿದೆ.
ಅಧಿಕ ಲಾಭದ ಉದ್ಧೇಶದಿಂದ ವಿವಿಧ ರೀತಿಯ ವಿಷಯುಕ್ತ ಗೊಬ್ಬರಗಳನ್ನು ಹಾಕಿ ಜನರಿಗೆ ವಿಷಯುಕ್ತ ತರಕಾರಿ ಮಾರಾಟ ಮಾಡುವ ಬದಲು ಸಾವಯವ ಗೊಬ್ಬರ ಹಾಕಿ ಬೆಳೆಸಿದ ತರಕಾರಿಯನ್ನು ಮಾಡಿ ಮಾರಾಟ ಮಾಡಿದರೆ ಅಧಿಕ ಇಳುವರಿ ಹಾಗೂ ಉತ್ತಮ ಮಾರ್ಕೆಟ್ ಲಭಿಸುತ್ತದೆ. ಜತೆಗೆ ಬೇಡಿಕೆ ಹೆಚ್ಚಾಗುವುದಲ್ಲದೇ ದರ ಕೂಡ ದುಪ್ಪಟ್ಟು ಸಿಗುವುದರೊಂದಿಗೆ ಮನಸ್ಸಿಗೂ ನೆಮ್ಮದಿ, ಸಮಾಧಾನ ದೊರೆಯುತ್ತದೆ ಎನ್ನುತ್ತಾರೆ ಕೃಷಿಕ ವೆಂಕಪ್ಪ ಪೂಜಾರಿ.
ಇದನ್ನೂ ಓದಿ: ಗುಂಡ್ಲುಪೇಟೆಯ ಶಾಲೆಯಲ್ಲಿದೆ 'ಅಕ್ಷರ ದಾಸೋಹ ಜೋಳಿಗೆ'.. ನಿತ್ಯವೂ ವಿದ್ಯಾರ್ಥಿಗಳಿಗೆ ಬಗೆ ಬಗೆ ಭೋಜನ