ಮಂಗಳೂರು: ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಮೃತರ ಅಂತ್ಯಕ್ರಿಯೆ ನಡೆಸುವರಿಗೆ ವಿಪರೀತ ಬೇಡಿಕೆ ಸೃಷ್ಟಿಯಾಗಿದ್ದು, ಸುರಕ್ಷತೆಯತ್ತ ಒತ್ತುಕೊಟ್ಟು ನಿಯಮಾನುಸಾರ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.
ಓದಿ: ಕೋವಿಡ್ ಕರ್ತವ್ಯ: ಸಿಬ್ಬಂದಿಗೆ ರಿಸ್ಕ್ ಭತ್ಯೆ ನೀಡಲು ಸರ್ಕಾರ ಆದೇಶ
ಕೊರೊನಾ ಸೋಂಕಿನಿಂದ ಮೃತಪಟ್ಟವರ ಮೃತದೇಹವನ್ನು ಅಂತ್ಯಕ್ರಿಯೆ ಮಾಡುವುದು ಬಹಳಷ್ಟು ಕಠಿಣ ಕೆಲಸ. ಅಂತ್ಯಕ್ರಿಯೆ ನಡೆಸುವ ಕಾರ್ಮಿಕರು ಕೋವಿಡ್ ಮೃತದೇಹಗಳ ಅಂತ್ಯಕ್ರಿಯೆ ಬಗ್ಗೆ ಆತಂಕಗೊಂಡಿದ್ದಾರೆ. ಮೃತದೇಹಗಳಿಂದ ಕೊರೊನಾ ಸೋಂಕು ಹರಡುವುದಿಲ್ಲ ಎಂಬುದನ್ನು ಮನವರಿಕೆ ಮಾಡಿದ ಬಳಿಕವಷ್ಟೇ ಮುಂದೆ ಬಂದಿದ್ದಾರೆ. ಜಿಲ್ಲೆಯಲ್ಲಿ ಅಂತ್ಯಕ್ರಿಯೆ ನಡೆಸುವ ಕಾರ್ಮಿಕರು ಮಾತ್ರವಲ್ಲದೇ ಸಾಮಾಜಿಕ ಕಾರ್ಯಕರ್ತರುಗಳು ತೊಡಗಿಸಿಕೊಂಡಿದ್ದು, ಅವರ ಸುರಕ್ಷತೆಗೆ ಒತ್ತು ನೀಡಲಾಗುತ್ತಿದೆ.
ಮಂಗಳೂರಿನ ವಿವಿಧ ಸಮಾಧಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಾಲಿಕೆ ಸಿಬ್ಬಂದಿ ಜೊತೆಗೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಕೈಜೋಡಿಸಿದ್ದು, ಇವರೆಲ್ಲರೂ ಪಿಪಿಇ ಕಿಟ್ ಧರಿಸಿಕೊಂಡು ಪಾಲ್ಗೊಳ್ಳುತ್ತಿದ್ದಾರೆ. ಒಂದು ಮೃತದೇಹ ಸುಡಲು ಒಂದು ಪಿಪಿಇ ಕಿಟ್ ಬಳಸಿ ಸುರಕ್ಷತೆಗೆ ಒತ್ತು ನೀಡುತ್ತಿದ್ದಾರೆ. ಈಗಾಗಲೇ ಜಿಲ್ಲಾಡಳಿತದ ಮುತುವರ್ಜಿಯಿಂದ ಇವರಿಗೆಲ್ಲ ಲಸಿಕೆ ನೀಡಲಾಗಿದೆ.
ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರ ಅಂತ್ಯಕ್ರಿಯೆ ಉಚಿತವಾಗಿ ನಡೆಸಲು ಪಾಲಿಕೆ ನಿರ್ಧರಿಸಿದೆ. ವಿವಿಧ ಧಾರ್ಮಿಕ ಸಂಘಟನೆಗಳ ಕಾರ್ಯಕರ್ತರುಗಳು ಮೃತರ ಅಂತ್ಯಸಂಸ್ಕಾರವನ್ನು ಆಯಾ ಧರ್ಮದ ವಿಧಿಯಾನುಸರ ನಡೆಸಿಕೊಂಡು ಹೋಗುತ್ತಿದ್ದಾರೆ.
ಅಂತ್ಯಕ್ರಿಯೆ ನಡೆಸುವವರ ಹಿತದೃಷ್ಟಿಯಿಂದ ಮಂಗಳೂರಿನ ಸೇವಾಂಜಲಿ ಟ್ರಸ್ಟ್ನಿಂದ ವಿಮೆ ಸೌಲಭ್ಯ ನೀಡಲಾಗಿದೆ. 2 ಲಕ್ಷ ರೂ.ಯನ್ನು ಟ್ರಸ್ಟ್ ಮೂಲಕ ಮಾಡಲಾಗಿದೆ.