ಕಡಬ (ದಕ್ಷಿಣ ಕನ್ನಡ): ಒಂದು ಕಡೆ ಕೋಲು ಹಿಡಿದು ಸರದಿ ನಿಯಂತ್ರಣ ಮಾಡುತ್ತಿದ್ದ ಟೋಪಿ ಧರಿಸಿದ ಬಾಲ ಪೊಲೀಸರು. ಇನ್ನೊಂದು ಕಡೆ ಸಾಲಾಗಿ ಬಂದು ಸಾರ್ವತ್ರಿಕ ಚುನಾವಣೆ ಮಾದರಿಯಂತೆ ವಿದ್ಯುನ್ಮಾನ ಮತಯಂತ್ರ ಬಳಕೆ ಮಾಡಿ ಮತ ಚಲಾಯಿಸುವ ಮಕ್ಕಳು. ಕಡಬ ತಾಲೂಕಿನ ಓಂತ್ರಡ್ಕ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ದೃಶ್ಯಗಳು ಕಂಡುಬಂದವು.
ಓಂತ್ರಡ್ಕ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರತಿ ವರ್ಷ ಶಾಲಾ ಮಂತ್ರಿ ಮಂಡಲ ಆಯ್ಕೆ ಪ್ರಕ್ರಿಯೆ ಮತಪತ್ರಗಳ ಮೂಲಕ ಮತ ಚಲಾಯಿಸಲಾಗುತ್ತಿತು. ಆದರೆ ಈ ವರ್ಷ ಮಕ್ಕಳಿಗೆ ಮತದಾನ ಅರಿವು ಮೂಡಿಸುವ ಸಲುವಾಗಿ ನೂತನವಾಗಿ ಮತದಾನಕ್ಕೆ ಇವಿಎಂ ಬಳಕೆ ಮಾಡಲಾಯಿತು. ಮೊಬೈಲ್‌ನಲ್ಲಿ ವೋಟಿಂಗ್ ಮಷಿನ್ ಆ್ಯಪ್ ಮೂಲಕ ವಿದ್ಯಾರ್ಥಿಗಳು ಮತದಾನ ಮಾಡಿದರು.
ಮೊಬೈಲ್ ವೋಟಿಂಗ್ ಮಷಿನ್:
ಇವಿಎಂನಲ್ಲಿರುವಂತೆ ಒಟ್ಟು ಹತ್ತು ಹುದ್ದೆಗಳಿಗೆ ಹತ್ತು ಮೊಬೈಲ್‌ಗಳನ್ನು ಬಳಸಿ 20 ಅಭ್ಯರ್ಥಿಗಳ ಮಾಹಿತಿಗಳನ್ನು ವ್ಯವಸ್ಥೆಗೊಳಿಸಲಾಗಿತ್ತು. ಚುನಾವಣೆ ನಡೆಯುವ ಮೊದಲು ಇವಿಎಂ ಮಷಿನ್‌ನಲ್ಲಿರುವ ಬ್ಯಾಲಟಿಂಗ್, ಕ್ಲೋಸ್ ರಿಸಲ್ಟ್, ಕ್ಲಿಯರ್ ಬಟನ್‌ಗಳು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬ ಮಾಹಿತಿಯನ್ನು ಶಿಕ್ಷಕ ದಿಲೀಪ್ ಕುಮಾರ್.ಎಸ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ಚುನಾವಣೆ ಪ್ರಚಾರ, ಚುನಾವಣೆ ಪ್ರಕ್ರಿಯೆಗಳು ವ್ಯವಸ್ಥಿತವಾಗಿ ಜರುಗುವ ಮೂಲಕ ವಿದ್ಯಾರ್ಥಿಗಳಿಗೆ ಆಧುನಿಕ ಚುನಾವಣೆಯ ನೈಜ ಅರಿವು ಮೂಡಿಸಲಾಯಿತು. ಶಾಲಾ ಮೈದಾನದಲ್ಲಿ ಚುನಾವಣಾ ಅಭ್ಯರ್ಥಿಗಳು ಮತ ಪ್ರಚಾರ ನಡೆಸಿ ತಮಗೇ ಮತ ಹಾಕುವಂತೆ ಇತರೇ ವಿದ್ಯಾರ್ಥಿಗಳನ್ನು ಮನವೊಲಿಸುತ್ತಿದ್ದ ದೃಶ್ಯಗಳು ಸಾರ್ವತ್ರಿಕ ಚುನಾವಣೆಯನ್ನು ನೆನಪಿಸುತ್ತಿತ್ತು.
ಶೇ.100 ರಷ್ಟು ಮತದಾನ:
ಬೆಳಿಗ್ಗೆ 10:30 ರಿಂದ 12 ರವರೆಗೆ ಮತದಾನ ಬಹು ಶಿಸ್ತಿನಿಂದಲೇ ನಡೆಯಿತು. ಭಾವಿ ಮತದಾರರು ಸರದಿ ಸಾಲಿನಲ್ಲಿ ನಿಂತು ಕೈಗೆ ಮಸಿ ಹಾಕಿಸಿಕೊಂಡು ತಮ್ಮ ನೆಚ್ಚಿನ ಅಭ್ಯರ್ಥಿಗೆ ಮೊಬೈಲ್ ವೋಟಿಂಗ್ ಮಷಿನ್ ಬಟನ್ ಒತ್ತುವುದರ ಮೂಲಕ ಮತ ಚಲಾಯಿಸಿದರು. 5 ರಿಂದ 8 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮತದಾನದ ಹಕ್ಕನ್ನು ನೀಡಲಾಗಿತ್ತು. ಶೇ.100 ರಷ್ಟು ಮತದಾನವಾಯಿತು. ಮತದಾನ ಮಾಡಲು ಪತ್ಯೇಕ ಒಂದು ಮತಗಟ್ಟೆಯನ್ನು ಸ್ಥಾಪಿಸಲಾಗಿತ್ತು.
ಟೋಪಿವಾಲಾ ಇಬ್ಬರು ವಿದ್ಯಾರ್ಥಿಗಳನ್ನು ಭದ್ರತಾ ಸಿಬ್ಬಂದಿಯಾಗಿ ನಿಯೋಜಿಸಲಾಗಿತ್ತು. ವಿದ್ಯಾರ್ಥಿಗಳು ತಮ್ಮ ಮತ ಹಾಕಲು ಹುಮ್ಮಸ್ಸಿನಿಂದ ಶಾಂತವಾಗಿ ಬರುತ್ತಿದ್ದ ದೃಶ್ಯ ಮತ್ತು ಮತಗಟ್ಟೆಯಲ್ಲಿ ವೋಟಿಂಗ್ ಮಷಿನ್ ಬಟನ್ ಒತ್ತುತ್ತಿದ್ದಾಗ ಬರುತ್ತಿದ್ದ ಬೀಪ್ ಸೌಂಡ್ ಸಾರ್ವತ್ರಿಕ ಚುನಾವಣೆಯೇ ನಡೆಯುತ್ತಿದೆ ಎಂಬ ವಾತಾವರಣ ಸೃಷ್ಟಿಸಿತ್ತು.
ಚುನಾವಣೆಯಲ್ಲಿ ಓಂತ್ರಡ್ಕ ವಿದ್ಯಾರ್ಥಿಗಳ ಮಕ್ಕಳ ಪಕ್ಷ ಮತ್ತು ಮಕ್ಕಳ ಪ್ರಜಾಪ್ರಭುತ್ವ ಪಕ್ಷ ಎಂಬ ಎರಡು ಪಕ್ಷಗಳ ಅಡಿಯಲ್ಲಿ ವಿದ್ಯಾರ್ಥಿಗಳು ಸ್ಪರ್ಧಿಸಿದ್ದು ಬಹಳ ಕುತೂಹಲಕ್ಕೆ ಕಾರಣವಾಗಿತ್ತು. ಮತದಾನ ಮುಗಿಯುತ್ತಿದ್ದಂತೆ ಎಲ್ಲಾ ಅಭ್ಯರ್ಥಿಗಳ ಸಮ್ಮುಖದಲ್ಲಿ ವೋಟಿಂಗ್ ಮಷಿನ್‌ನ ರಿಸಲ್ಟ್ ಬಟನ್ ಒತ್ತುವುದರ ಮೂಲಕ ಅಭ್ಯರ್ಥಿಗಳು ಪಡೆದ ಮತಗಳನ್ನು ತೋರಿಸಲಾಯಿತು.
ಸಿಎಂ, ಡಿಸಿಎಂ ಆಯ್ಕೆ:
ಓಂತ್ರಡ್ಕ ಮಕ್ಕಳ ಪಕ್ಷದ ಎಲ್ಲಾ ಹತ್ತು ಅಭ್ಯರ್ಥಿಗಳು ಹೆಚ್ಚಿನ ಮತ ಪಡೆದು ಬಹುಮತದೊಂದಿಗೆ ಶಾಲಾ ಮಕ್ಕಳ ಮಂತ್ರಿಮಂಡಲದ ಚುಕ್ಕಾಣಿ ಹಿಡಿದರು. ಓಂತ್ರಡ್ಕ ಮಕ್ಕಳ ಪಕ್ಷದ ನಾಯಕ ಚಂದ್ರಶೇಖರ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಗಣೇಶ ಉಪ ಮುಖ್ಯಮಂತ್ರಿಯಾಗಿ, ರಮ್ಯ ಶಿಕ್ಷಣ ಮಂತ್ರಿಯಾಗಿ, ರಶ್ಮಿ ಸ್ವಚ್ಛತಾ ಮಂತ್ರಿಯಾಗಿ, ಸುಹಾಶ್ರೀ ಗೃಹಮಂತ್ರಿಯಾಗಿ, ಜ್ಯೋತಿ ಸಾಂಸ್ಕೃತಿಕ ಮಂತ್ರಿಯಾಗಿ, ಕಿಶನ್ ಕೃಷಿ ಮಂತ್ರಿಯಾಗಿ, ಸುಧಾಕರ ನೀರಾವರಿ ಮಂತ್ರಿಯಾಗಿ, ಮನ್ವಿತ್ ಆರೋಗ್ಯ ಮಂತ್ರಿಯಾಗಿ, ಭಾವಿಕ ಕ್ರೀಡಾ ಮಂತ್ರಿಯಾಗಿ ಆಯ್ಕೆಯಾದರು.
ಮಕ್ಕಳ ಪ್ರಜಾಪ್ರಭುತ್ವ ಪಕ್ಷದ ರೂಪಿಕ ಪಿ.ಎನ್ ಅವರು ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು. ಮುಖ್ಯ ಚುನಾವಣಾಧಿಕಾರಿಯಾಗಿ ಮುಖ್ಯ ಶಿಕ್ಷಕ ನೀಲಯ್ಯ ನಾಯ್ಕ ಕರ್ತವ್ಯ ನಿರ್ವಹಿಸಿದರು. ಟಿ.ಜಿ.ಟಿ ಶಿಕ್ಷಕ ಮಂಜುನಾಥ್ ಹೆಚ್.ಬಿ ಮತ್ತು ಅತಿಥಿ ಶಿಕ್ಷಕಿ ಅನಿತಾ.ಕೆ ಮತಗಟ್ಟೆ ಅಧಿಕಾರಿಯಾಗಿದ್ದರು. ಶಾಲಾ ಹಿರಿಯ ಶಿಕ್ಷಕಿ ಮೇರಿ ಕೆ.ಎಂ ಚುನಾವಣಾ ವೀಕ್ಷಕರಾಗಿದ್ದರು.