ಸುಳ್ಯ(ದಕ್ಷಿಣ ಕನ್ನಡ): ಸುಳ್ಯದ ಬೆಳ್ಳಾರೆಯಲ್ಲಿ ಹತ್ಯೆಯಾದ ಬಿಜೆಪಿ ಯುವ ಮುಖಂಡನ ಮನೆಗೆ ರಾಜ್ಯದ ಮುಖ್ಯಮಂತ್ರಿ, ಗೃಹ ಸಚಿವರು ಸೇರಿದಂತೆ ಇತರ ಸಚಿವರು, ಶಾಸಕರು, ಸ್ವಾಮೀಜಿಗಳು ಹಾಗೂ ಕೆಲ ಸಂಘಟನೆಯ ಮುಖ್ಯಸ್ಥರು, ಅಧಿಕಾರಿಗಳು, ಕಾರ್ಯಕರ್ತರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಆದರೆ, ಸುಳ್ಯದವರೇ ಆದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರು ಬಾರದೇ ಇರುವುದು ಇದೀಗ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಕುರಿತಾಗಿ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಪೋಸ್ಟ್ ಒಂದು ವೈರಲ್ ಆಗಿದೆ. ನಮ್ಮೂರಿನಲ್ಲಿ ಡಿ.ವಿ ಸದಾನಂದ ಗೌಡ ಅಂತ ಒಬ್ರು ಇದ್ರು. ಈಗ ಅವರು ಭೂಮಿ ಮೇಲೆ ಇದ್ದಾರಾ ಅಂತ ಯಾರಿಗಾದ್ರು ಗೊತ್ತಾ?. ಯಾಕಂದ್ರೆ ಅವರ ಊರಿನಲ್ಲೇ ಒಂದು ಕೊಲೆಯಾಗಿದೆ. ಅವರಿಗೆ ತಿಳಿಸಬೇಕಿತ್ತು. ಅವರ ಫೋನ್ ನಂಬರ್ ಯಾರಲ್ಲಾದರೂ ಇದ್ದರೆ ಕೊಡಿ. ನಾನಾದರು ಫೋನ್ ಮಾಡಿ ಹೇಳ್ತೇನೆ ಎನ್ನುವ ಬರವಣಿಗೆಯ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ತರಹ ಪೋಸ್ಟ್ ಒಂದು ಹರಿದಾಡುತ್ತಿರುವ ಬೆನ್ನಲ್ಲೇ ಇದೀಗ ಇಂದು ಮಧ್ಯಾಹ್ನ ಡಿ.ವಿ ಸದಾನಂದ ಗೌಡ ಅವರು ಮೃತ ಪ್ರವೀಣ್ ಅವರ ಮನೆಗೆ ಭೇಟಿ ನೀಡುವ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಸುಳ್ಯಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ. ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡರು ಮೂಲತಃ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡದವರು.
ಇದನ್ನೂ ಓದಿ: ಸರಣಿ ಹತ್ಯೆ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು ಶಾಂತಿ ಸಭೆ ಆಯೋಜನೆ