ಮಂಗಳೂರು: ಅಡಿಕೆ (Arecanut) ಮಾನವನ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಎಂದು ಜಾರ್ಖಂಡ್ ಸಂಸದ ನಿಶಿಕಾಂತ್ ದುಬೆ (Jharkhand MP Nishikant Dubey) ನೀಡಿರುವ ಹೇಳಿಕೆಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇದು ಜನರಿಗೆ ತಪ್ಪು ಸಂದೇಶ ನೀಡುತ್ತದೆ. ಮಾತ್ರವಲ್ಲದೇ, ರೈತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕ್ಯಾಂಪ್ಕೊ (CAMPCO) ಹೇಳಿದೆ.
ಅಡಿಕೆ ಮಾನವ ಹಾಗು ಜಾನುವಾರುಗಳಿಗೆ ಅಗತ್ಯವಿರುವ ಔಷಧೀಯ ಗುಣಗಳನ್ನು ಹೊಂದಿರುವ ಪದಾರ್ಥ. ಅಲ್ಲದೇ ಅಡಿಕೆಯಲ್ಲಿ ಮಧುಮೇಹ, ಕೊಲೆಸ್ಟ್ರಾಲ್, ಹಲವಾರು ಅನುಪಯುಕ್ತ ಬ್ಯಾಕ್ಟೀರಿಯಾ, ಶಿಲೀಂಧ್ರಗಳು, ಪ್ರೊಟೊಜೋವನ್ ಪರಾವಲಂಬಿ ಇತ್ಯಾದಿಗಳನ್ನು ನಿವಾರಿಸುವ ಶಕ್ತಿ ಹೊಂದಿದೆ.
ಮಾರಕ ರೋಗ ಹೆಚ್‌ಐವಿ (HIV) ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದ್ದು, ಆ್ಯಂಟಿ ಮಲೇರಿಯಲ್ (Anti-malarial), ಆಂಥೆಲ್ಮಿಂಟಿಕ್ (Anthelmintic) ಗುಣಲಕ್ಷಣಗಳನ್ನೂ ಸಹ ಹೊಂದಿದೆ. ಇದು ನೋವು ಶಮನಕಾರಿ ಹಾಗು ಗಾಯ ಮತ್ತು ಹುಣ್ಣುಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಜತೆಗೆ ಉತ್ತಮ ಆ್ಯಂಟಿ- ವೆನಮ್ (Anti- Venom) ಗುಣಲಕ್ಷಣಗಳನ್ನು ಹೊಂದಿದೆ.
ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಸಮರ್ಥ ಸಂಶೋಧನಾ ಸಂಸ್ಥೆಗಳು ನಡೆಸಿರುವ ಇತ್ತೀಚಿನ ಸಂಶೋಧನೆಗಳಿಂದ ಸಕಾರಾತ್ಮಕ ಫಲಿತಾಂಶಗಳು ಲಭ್ಯವಾಗಿದೆ.
1974ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಅಡಿಕೆ ಕ್ಯಾನ್ಸರ್ ರೋಗವನ್ನು ಗುಣಪಡಿಸುತ್ತದೆ ಎಂದು ವರದಿ ಮಾಡಿದ್ದಾರೆ. ಅಮೆರಿಕಾ, ಅಟ್ಲಾಂಟಾ, ಎಮೋರಿ ವಿವಿಯ ವಿನ್ಶಿಪ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನ ಪ್ರಖ್ಯಾತ ವಿಜ್ಞಾನಿಗಳ ಗುಂಪಿನಿಂದಲೂ ಇದನ್ನು ದೃಢೀಕರಿಸಲಾಗಿದೆ ಎಂದು ಕ್ಯಾಂಪ್ಕೊ (CAMPCO) ತಿಳಿಸಿದೆ.
ಅಡಿಕೆ ಸೇವನೆಯು ಮಾರಕ ಕ್ಯಾನ್ಸರ್‌ನಂಥ ರೋಗಗಳಿಗೆ ಆಹ್ವಾನ ನೀಡಿದಂತೆ. ಆದ್ದರಿಂದ ಜನರು ಅಡಿಕೆ ಸೇವಿಸದಂತೆ ನಿಷೇಧಿಸಬೇಕು ಎಂದು ಒತ್ತಾಯಿಸಿ ಜಾರ್ಖಂಡ್‌ನ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮೋದಿ ಅವರಿಗೆ ಪತ್ರ ಬರೆದಿದ್ದರು.
ಇದನ್ನೂ ಓದಿ: ಅಡಕೆಯಲ್ಲಿದೆ ಕ್ಯಾನ್ಸರ್ ಗುಣಕಾರಕ ಅಂಶ: ವೈಜ್ಞಾನಿಕ ಆಧಾರ ರೂಪಿಸುವ ನಿಟ್ಟಿನಲ್ಲಿ ಕ್ಯಾಂಪ್ಕೊ ಹೆಜ್ಜೆ