ಸುಳ್ಯ ( ದಕ್ಷಿಣ ಕನ್ನಡ) : ಮಾಜಿ ಇಂಧನ ಸಚಿವ ಡಿ ಕೆ ಶಿವಕುಮಾರ್ ಅವರಿಗೆ ಕರೆ ಮಾಡಿ ನಿಂದಿಸಿದ ಆರೋಪದಲ್ಲಿ ಬೆಳ್ಳಾರೆಯ ಸಾಯಿ ಗಿರಿಧರ್ ರೈಗೆ ಜೈಲು ಶಿಕ್ಷೆ ವಿಧಿಸಿ ಸುಳ್ಯ ನ್ಯಾಯಾಲಯವು ತೀರ್ಪು ನೀಡಿತ್ತು. ಈ ಬಗ್ಗೆ ಮೇಲ್ಮನವಿ ಸಲ್ಲಿಸಿದ್ದ ಆರೋಪಿ ಗಿರಿಧರ್ ರೈ ಅವರಿಗೆ ವಿಧಿಸಿದ್ದ ಜೈಲು ಶಿಕ್ಷೆಗೆ ಪುತ್ತೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ.
ಸುಳ್ಯ ತಾಲೂಕಿನ ಬೆಳ್ಳಾರೆಯ ಸಾಯಿ ಗಿರಿಧರ್ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಂದಿನ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ, ಮಾನ ಹಾನಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿ ಮಾಡಿದ ಆರೋಪಗಳಡಿ ನಾಲ್ಕು ಪ್ರಕರಣ ದಾಖಲಾಗಿತ್ತು.
ಇದರ ವಿಚಾರಣೆ ನಡೆಸಿದ ಸುಳ್ಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸೋಮಶೇಖರ್ ಎ. ಅವರು ಏಪ್ರಿಲ್ 18ರಂದು ತೀರ್ಪು ಪ್ರಕಟಿಸಿದ್ದರು. ಈ ತೀರ್ಪಿನಲ್ಲಿ ನಾಲ್ಕು ಅಪರಾಧಗಳಲ್ಲಿಯೂ ಸೇರಿ 2 ವರ್ಷ ಜೈಲು ಶಿಕ್ಷೆ ಮತ್ತು ಒಂದು ಪ್ರಕರಣದಲ್ಲಿ ರೂಪಾಯಿ 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಿತ್ತು. ದಂಡ ತೆರಲು ತಪ್ಪಿದ್ದಲ್ಲಿ ಒಂದು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದರು. 4 ಅಪರಾಧಗಳ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿತ್ತು. ಜೊತೆಗೆ ಮೇಲ್ಮನವಿ ಸಲ್ಲಿಸಲೂ ಆರೋಪಿಗೆ ಒಂದು ತಿಂಗಳ ಕಾಲಾವಕಾಶವನ್ನು ನ್ಯಾಯಾಲಯ ನೀಡಿತ್ತು.
ಸುಳ್ಯ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಆರೋಪಿ ಸಾಯಿ ಗಿರಿಧರ್ ಅವರು ಪುತ್ತೂರಿನ 5ನೇ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಅಧಿಕಾರಿ ಅಥವಾ ಜನಪ್ರತಿನಿಧಿಗಳ ಬಳಿ ನಾಗರಿಕರು ಪ್ರಶ್ನೆ ಮಾಡುವುದು ಅಪರಾಧವಲ್ಲ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದ ಆರೋಪಿ ಪರ ವಕೀಲರು, ಸುಳ್ಯ ನ್ಯಾಯಾಲಯ ನೀಡಿದ ತೀರ್ಪಿಗೆ ತಡೆ ನೀಡುವಂತೆ ಕೋರಿದ್ದರು. ನ್ಯಾಯಪೀಠವು ಆರೋಪಿ ಪರ ವಕೀಲರ ವಾದವನ್ನು ಆಲಿಸಿ, ಆರೋಪಿ ಸಾಯಿ ಗಿರಿಧರ್‌ಗೆ ಸುಳ್ಯ ನ್ಯಾಯಾಲಯವು ವಿಧಿಸಿದ ಜೈಲು ಶಿಕ್ಷೆಗೆ ತಡೆಯನ್ನು ನೀಡಿ ಆದೇಶಿಸಿದೆ.
ಓದಿ :ಮೇ 25ರಂದು ಕುಕ್ಕೆಯಲ್ಲಿ ಸರಳ ಸಾಮೂಹಿಕ ವಿವಾಹ : ಆಸಕ್ತರಿಂದ ಅರ್ಜಿ ಆಹ್ವಾನ..