ಸುಬ್ರಹ್ಮಣ್ಯ: ಬೆಂಗಳೂರಿನ ಯುವಕನೊಬ್ಬ ತನ್ನ ಅಂಗವೈಕಲ್ಯವನ್ನು ಮೆಟ್ಟಿ ನಿಂತು ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿ ಕುಮಾರಪರ್ವತ ಏರಿದ್ದಾರೆ. ವಿಕಲಚೇತನ ಎಂಬುದು ಬಾಹ್ಯ ತೊಂದರೆ. ಅದು ಮನಸ್ಸಿಗೆ ಇಲ್ಲ. ಛಲ ಮತ್ತು ದೃಢ ಮನಸ್ಸಿದ್ದರೆ ಯಾವುದಾದ್ರೂ ಸಾಧಿಸಬಹುದು ಎಂಬುದನ್ನು ಇವರು ತೋರಿಸಿ ಕೊಟ್ಟಿದ್ದಾರೆ.
ಹೌದು ಇವರೇ ಸುನಿಲ್.. ಒಂಟಿಗಾಲಿನಲ್ಲಿ ಕುಮಾರ ಪರ್ವತವನ್ನು ಏರಿ ಸಾಧನೆ ಮಾಡಿದ ಸಾಹಸಿ. ಮೂಲತಃ ಹಾಸನದವರಾದ ಸುನಿಲ್ ಈಗ ಬೆಂಗಳೂರಿನ ಮೆಸ್ಕಾಂ ಅಧಿಕಾರಿ. ಸುನಿಲ್ 6ನೇ ತರಗತಿ ಓದುತ್ತಿದ್ದಾಗ ಎಡಗಾಲಿಗೆ ಗ್ಯಾಂಗ್ರಿನ್ ಬಾಧಿಸಿತು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ 10 ವರ್ಷಗಳ ಹಿಂದೆ ವೈದ್ಯರ ಸಲಹೆಯಂತೆ ಎಡಗಾಲನ್ನು ತುಂಡರಿಸಬೇಕಾಗಿ ಬಂತು. ಆಕಾಶವೇ ಕಳಚಿ ಬಿದ್ದ ಅನುಭವವಾದರೂ ಎದೆಗುಂದಲಿಲ್ಲ. ಬದಲಿಗೆ ತನ್ನ ವೈಕಲ್ಯದ ನಡುವೆಯೂ ಬಿಇ ಪದವಿ ಪಡೆದರು. ಪ್ರಸ್ತುತ ಬೆಂಗಳೂರಿನ ಮಾಗಡಿಯಲ್ಲಿ ಮೆಸ್ಕಾಂ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಬಾಲ್ಯ ಕಾಲದಿಂದಲೂ ಸುನಿಲ್‌ಗೆ ಚಾರಣದ ಹವ್ಯಾಸ ಜೋರಾಗಿತ್ತು. ಬಿಡುವಿದ್ದಾಗಲೆಲ್ಲ ತನ್ನ ಗೆಳೆಯರ ಜೊತೆಗೆ ಬೆಟ್ಟ ಹತ್ತುವುದಕ್ಕೆ ಹೋಗುತ್ತಿದ್ದರು. ಬೆಂಗಳೂರು ಆಸುಪಾಸಿನ ಶಿವಗಂಗೆ ಬೆಟ್ಟ, ಮಾಗಡಿಯ ಸಾವನದುರ್ಗಾ, ಕುಣಿಗಲ್‌ನ ಉತ್ರಿ ದುರ್ಗ, ತಡಿಯಂಡ ಮೋಳ್ ಮುಂತಾದ ಕಡೆಗಳಲ್ಲಿ ಈಗಾಗಲೇ ಒಂಟಿಗಾಲಿನಲ್ಲಿ ಏರಿ ಸಾಹಸ ತೋರಿದ್ದಾರೆ. ಆದರೆ ಈ ಬಾರಿ ಇವರ ತಂಡ ನಿರ್ಣಯ ಮಾಡಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ಕುಮಾರ ಪರ್ವತ ಆಗಿತ್ತು. ದಿವ್ಯಾಂಗ ಚೇತನರೊಬ್ಬರು ಕುಮಾರ ಪರ್ವತ ಏರಿರುವುದು ಇದೇ ಮೊದಲು ಎನ್ನುತ್ತಾರೆ ಸ್ಥಳೀಯರು.
ತನ್ನ ಕೈಯಲ್ಲಿರುವ ಊರುಗೋಲು, ಗೆಳೆಯರ ಸಹಾಯದಿಂದ ಬೆಟ್ಟ ಹತ್ತಿಯೇ ಬಿಟ್ಟರು ಸುನಿಲ್. ಅಂತೂ ಸುನಿಲ್ ಅವರು ಕ್ರಮಿಸಿದ ಒಟ್ಟು ದೂರ 26 ಕಿ.ಮೀ. ಸುನಿಲ್ ತಂದೆ ಲಿಂಗರಾಜ್ ಹಾಸನದಲ್ಲಿ ಲಾರಿ ಚಾಲಕ, ತಾಯಿ ಗೃಹಿಣಿ. ಸಹೋದರ ಖಾಸಗಿ ಉದ್ಯೋಗಿ. ಅವಿವಾಹಿತರಾಗಿರುವ ಸುನಿಲ್ ಕಷ್ಟದಲ್ಲಿ ಬೆಳೆದು ಬಂದವರು. ಕ್ರೀಡೆಯಲ್ಲಿ ಆಸಕ್ತಿ ಇರುವ ಅವರು ಹಾಸನ-ಬೆಂಗಳೂರು ನಡುವೆ ಸ್ಕೂಟಿಯಲ್ಲಿ ಸಂಚರಿಸುತ್ತಿರುವುದು ಇನ್ನೊಂದು ವಿಶೇಷ.
ಕುಮಾರ ಪರ್ವತ ಬೆಟ್ಟ ಏರುವುದು ಅಷ್ಟು ಸುಲಭದ ಮಾತಲ್ಲ. ಚಾರಣಿಗರಿಗೆ ಕುಮಾರ ಪರ್ವತದ ಚೆಲುವಿನ ಹಾದಿಯ ಜೊತೆಗೆ ದುರಂತದ ದಾರಿಯೂ ಹೌದು. ಕಲ್ಲುಗಳ ಮೇಲೆ ಜಾರಿ ಇಳಿದು ತೆರಳುವ ಕಡಿದಾದ ಮಾರ್ಗದಲ್ಲಿ ಹಲವಾರು ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಆರಂಭದ ಮೂರ್ನಾಲ್ಕು ಕಿ.ಮೀ. ದೂರ ದಟ್ಟ ಕಾಡು, ಕಾಡುಪ್ರಾಣಿಗಳ ಹಾವಳಿಯಿದೆ, ಇಲ್ಲಿ ಆನೆಗಳು ಅಡ್ಡಾಡುತ್ತವೆ. ಇಲ್ಲಿ ಬಹಳ ಎಚ್ಚರಿಕೆಯಿಂದ ನಡೆಯಬೇಕು. ಇವೆಲ್ಲದರ ನಡುವೆ ಇದೇ ಕಡೆ ಚಾರಣ ಮಾಡಿ ತನಗೆ ವೈಕಲ್ಯ ವರದಾನವೆಂಬುದನ್ನು ತೋರಿಸಿದ್ದಾರೆ ಸುನಿಲ್.