ಮಂಗಳೂರು: ಕಲಿಕೆಗೆಂದು ಮಂಗಳೂರಿಗೆ ಬಂದ ಹೊರ ರಾಜ್ಯದ ಹಾಗು ಹೊರ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಮಂಗಳೂರಿನ ಕಾಲೇಜೊಂದು ದೀಪಾವಳಿ ಹಬ್ಬವನ್ನು ಸಂಸ್ಥೆಯಲ್ಲಿ ಆಚರಿಸಿ ಮಾದರಿಯಾಗಿದೆ.
ವಿವಿಧ ರಾಜ್ಯ, ಜಿಲ್ಲೆಗಳಿಂದ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿಗೆ ಬಂದಿರುವ ವಿದ್ಯಾರ್ಥಿಗಳಿಗೆ ಮನೆಯಿಂದ ನಾವು ದೂರವಿದ್ದೇವೆ, ತಮಗೆ ಹಬ್ಬದ ಸಂಭ್ರಮವಿಲ್ಲ ಎಂಬ ನೋವು ಕಾಡದಂತೆ ಮಂಗಳೂರಿನ ಕರಾವಳಿ ಕಾಲೇಜಿನ ಅಧ್ಯಕ್ಷ ಗಣೇಶ್ ರಾವ್ ಅವರು ವಿದ್ಯಾರ್ಥಿಗಳು ಕಾಲೇಜಿನಲ್ಲಿ ದೀಪಾವಳಿ ಆಚರಿಸಬೇಕೆಂದು ಪ್ರತಿ ವರ್ಷ ವ್ಯವಸ್ಥೆ ಮಾಡುತ್ತಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ, ದೀಪಗಳು ಮಾತ್ರವಲ್ಲದೆ ವಿದ್ಯಾರ್ಥಿಗಳ ಫ್ಯಾಶನ್ ಶೋ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಕಾಲೇಜಿನಲ್ಲಿ ದೀಪಾವಳಿ ಆಚರಿಸುತ್ತಿರುವುದು ವಿದ್ಯಾರ್ಥಿಗಳ ಖುಷಿಗೆ ಕಾರಣವಾಗಿದೆ. ಪ್ರತಿ ವರ್ಷ ಈ ಕಾಲೇಜಿನಲ್ಲಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ದೀಪಾವಳಿ ಆಚರಣೆಗೆ ಊರಿಗೆ ಹೋಗಿ ಸಂಭ್ರಮಿಸಲಾಗಲಿಲ್ಲ ಎಂಬ ಬೇಸರವನ್ನು ಮರೆಸಿದೆ.
ಕಾಲೇಜಿನ ಆವರಣದಲ್ಲಿ ವಿದ್ಯುತ್ ದೀಪಾಲಂಕಾರ, ಪಟಾಕಿಗಳ ಸಿಡಿತ, ಸಾಲು ಸಾಲು ದೀಪಗಳು, ರಂಗೋಲಿ, ಸಾಂಪ್ರದಾಯಿಕ ಫ್ಯಾಷನ್ ಶೋ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ರಂಜಿಸಿದವು. ಒಟ್ಟಿನಲ್ಲಿ ಮನೆಯಲ್ಲಿ ದೀಪಾವಳಿ ಆಚರಿಸಲಾಗದ ಬೇಸರದ ನಡುವೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ದೀಪಗಳ ಹಬ್ಬ ಆಚರಿಸಿ ಸಂಭ್ರಮಿಸಿದರು.