ಮಂಗಳೂರು: ನಗರದಲ್ಲಿ ಕೊರೊನಾ ಸೋಂಕಿತೆಯ ಅಂತ್ಯಸಂಸ್ಕಾರ ನಡೆಸಲು ಸ್ಥಳೀಯರು ಅಡ್ಡಿಪಡಿಸಿರುವುದು ಅತ್ಯಂತ ವಿಷಾದನೀಯ. ಇದಕ್ಕೆ ಜನರಿಗಿರುವ ಮಾಹಿತಿಯ ಕೊರತೆಯೇ ಕಾರಣ. ವೈದ್ಯ ವಿಜ್ಞಾನದ ಪ್ರಕಾರ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯಿಂದ ಸೋಂಕು ಹರಡುವುದಿಲ್ಲ ಎಂದು ಖ್ಯಾತ ವೈದ್ಯ, ಡಾ. ಎಂ. ಶಾಂತಾರಾಮ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮೊನ್ನೆ ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಜನರಿಂದ ವ್ಯಕ್ತವಾಗಿರುವ ಅಡ್ಡಿಯ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಸೋಂಕಿತ ವ್ಯಕ್ತಿಯ ಕೆಮ್ಮು, ಸೀನು, ಎಂಜಲಿನ ದ್ರವಗಳಿಂದ ಹರಡುತ್ತದೆ. ಈ ದ್ರವವನ್ನು ಆರೋಗ್ಯವಂತ ವ್ಯಕ್ತಿ ಮುಟ್ಟಿ ತನ್ನ ಬಾಯಿ, ಮೂಗನ್ನು ಸ್ಪರ್ಶಿಸಿದಲ್ಲಿ ರೋಗ ಹರಡುತ್ತದೆ. ಆದ್ರೆ ಕೊರೊನಾ ಸೋಂಕಿನಿಂದ ಮೃತಪಟ್ಟವರಿಂದ ಸೋಂಕು ಹರಡುವುದಿಲ್ಲ ಎಂದು ಹೇಳಿದ್ರು.
ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಲ್ಲಿ ಅಂತ್ಯಸಂಸ್ಕಾರ ನಡೆಸಲು ಅಡ್ಡಿಪಡಿಸುವುದು ಅತ್ಯಂತ ದುರಾದೃಷ್ಟಕರ. ದ.ಕ. ಜಿಲ್ಲೆಯವರು ಬುದ್ಧಿವಂತರು ಎಂದು ಕರೆಸಿಕೊಂಡವರು. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರು ಸಮಸ್ಯೆಯನ್ನು ಬಗೆಹರಿಸಲು ಚಿಂತನೆ ನಡೆಸಬೇಕೇ ಹೊರತು, ಜಿಜ್ಞಾಸೆಯನ್ನು ಹುಟ್ಟುಹಾಕಬಾರದು. ಕೊರೊನಾ ಸೋಂಕಿನಿಂದ ಯಾರೇ ಮೃತಪಟ್ಟಲ್ಲಿ, ಅಂತ್ಯಸಂಸ್ಕಾರವನ್ನು ಯಾವ ಪದ್ಧತಿಯಲ್ಲಿಯೂ ಅನುಸರಿಸಬಹುದು. ಆದರೆ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಸೋದು ಎಲ್ಲಾ ರೀತಿಯಿಂದಲೂ ಉತ್ತಮ ಎಂದು ಡಾ. ಎಂ. ಶಾಂತಾರಾಮ ಶೆಟ್ಟಿ ಸಲಹೆ ನೀಡಿದ್ದಾರೆ.
ಕೊರೊನಾ ಸೋಂಕಿನ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ಯಾಕೆಂದರೆ ಸರ್ಕಾರ ಸೋಂಕು ತಡೆಗಟ್ಟುವಲ್ಲಿ ಈಗಾಗಲೇ ಎಲ್ಲಾ ಕ್ರಮವನ್ನು ಕೈಗೊಂಡಿದೆ. ಆದ್ದರಿಂದ ಯಾರೂ ತಪ್ಪು ತಿಳಿವಳಿಕೆಗಳಿಂದ ಆತಂಕಕ್ಕೊಳಗಾಬಾರದು. ಸೋಂಕು ಹರಡದಂತೆ ತಡೆಗಟ್ಟಲು ಎಲ್ಲಾ ನಿಯಮಗಳನ್ನು ಸರ್ಕಾರ ಈಗಾಗಲೇ ಪಾಲಿಸುತ್ತಿದೆ ಎಂದು ಡಾ. ಎಂ. ಶಾಂತಾರಾಮ ಶೆಟ್ಟಿ ಹೇಳಿದ್ದಾರೆ.