ಮಂಗಳೂರು: ತುಳು ಭಾಷೆ ರಾಜ್ಯದ ಅಧಿಕೃತ ಭಾಷೆಯಾಗಬೇಕು. ಅಲ್ಲದೇ ಅದನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅವರು, ತುಳು ಭಾಷೆಯು ಪಠ್ಯವಾಗಿ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಹಂತದವರೆಗೂ ಆಯೋಜನೆಯಾಗಬೇಕು. ಅಲ್ಲದೆ ತುಳು ಲಿಪಿಯ ಕಲಿಕೆ ಪ್ರಾಥಮಿಕ ಶಾಲೆಯಿಂದಲೇ ಆಗಬೇಕೆಂಬ ಬಯಕೆಯಿದೆ. ಈ ಯೋಜನೆಗಳು ಕಾರ್ಯಗತಗೊಳ್ಳಲು ನನ್ನ ಅಧಿಕಾರಾವಧಿಯಲ್ಲಿ ಅವಿರತ ಶ್ರಮ ಪಡುತ್ತೇನೆ ಎಂದು ಹೇಳಿದರು.
ತುಳು ಭವನದೊಳಗೆ ಯಾರು ಬಂದರೂ ಹಿಂದಿರುಗುವಾಗ ತುಳುವಿನ ವಿಶ್ವರೂಪ ದರ್ಶನವಾಗಬೇಕು. ಆ ಶ್ರೇಷ್ಠ ಸ್ಥಿತಿ ನಿರ್ಮಾಣಕ್ಕೆ ಈ ಹಿಂದಿನ ಅಧ್ಯಕ್ಷರು ತುಂಬಾ ಶ್ರಮ ಪಟ್ಟಿದ್ದಾರೆ. ಅದಕ್ಕೆ ಸುಮಾರು ಮೂರು ಕೋಟಿ ರೂ.ಗಳ ಅವಶ್ಯಕತೆ ಇದೆ. ತುಳು ಭಾಷೆಯ ಸೊಗಡಿನ ಜಾನಪದ ಸಾಹಿತ್ಯದ ದಾಖಲೀಕರಣ ಆಗಬೇಕು. ಶಿಲಾಶಾಸನಗಳು ಉಳಿವಿಗೆ ಸಾಕಷ್ಟು ಪರಿಶ್ರಮ ಆಗಬೇಕು. ಅದಕ್ಕಾಗಿ ತುಳು ಅಕಾಡೆಮಿಯ ಹಿಂದಿನ ಅಧ್ಯಕ್ಷರುಗಳು, ತುಳು ಭಾಷೆಗೆ ಸೇವೆ ಸಲ್ಲಿಸಿದವರನ್ನು ಒಟ್ಟಿಗೆ ಸೇರಿಸಿ, ಸಲಹಾ ಸಮಿತಿ ರಚಿಸಿ ಈ ದೊಡ್ಡ ಹೊರೆಯನ್ನು ಮುಂದುವರಿಸುವ ಜವಾಬ್ದಾರಿ ವಹಿಸುತ್ತೇನೆ ಎಂದು ದಯಾನಂದ ಕತ್ತಲ್ ಸಾರ್ ಹೇಳಿದರು.