ಮಂಗಳೂರು: ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಾಮಗಾರಿ ನಡೆಸಿದರೂ ನಗರದ ಮಂಗಳಾದೇವಿ ಸಮೀಪದ ಗುಜ್ಜರಕೆರೆಯ ನೀರು ಇನ್ನೂ ಕುಡಿಯಲು ಯೋಗ್ಯವಾಗಿಲ್ಲ ಎಂದು ಲ್ಯಾಬ್ ವರದಿ ತಿಳಿಸಿದೆ. ಸ್ಮಾರ್ಟ್ ಸಿಟಿಯಿಂದ ಇತ್ತೀಚೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ ಇದೀಗ ಗುಜ್ಜರಕೆರೆಯ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಅಂಶಗಳು ಇರುವುದು ಲ್ಯಾಬ್ ವರದಿಯಲ್ಲಿ ಪತ್ತೆಯಾಗಿದೆ.
ಐತಿಹಾಸಿಕ ಕುರುಹು ಇರುವ ಗುಜ್ಜರಕೆರೆ ಹಲವು ವರ್ಷಗಳಿಂದ ಹೂಳು ತುಂಬಿ ಇದರ ಅಭಿವೃದ್ಧಿ ನೆನೆಗುದಿಗೆ ಬಿದ್ದಿತ್ತು. ಹಲವಾರು ವರ್ಷಗಳ ಹೋರಾಟದ ಬಳಿಕ ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಕೆರೆಯನ್ನು ಪುನರ್ ಅಭಿವೃದ್ಧಿಪಡಿಸಲಾಗಿತ್ತು. ಆ ಬಳಿಕ ಇದು ಪ್ರವಾಸಿ ಆಕರ್ಷಣೀಯ ಕೇಂದ್ರವಾಗಿಯೂ, ವಾಯುವಿಹಾರಿಗಳಿಗೆ ನೆಚ್ಚಿನ ತಾಣವಾಗಿ ಮಾರ್ಪಾಡಾಗಿತ್ತು. ಆದರೆ ಸಾಕಷ್ಟು ಕೋಟಿ ರೂ. ವೆಚ್ಚದಿಂದ ಗುಜ್ಜರಕೆರೆ ಅಭಿವೃದ್ಧಿಗೊಂಡರೂ, ಕೆರೆಯ ನೀರು ಮಾತ್ರ ಇನ್ನೂ ಬಳಕೆಗೆ ಯೋಗ್ಯವಾಗದಂತಾಗಿದೆ.
ಈ ಬಗ್ಗೆ ಮಾತನಾಡಿದ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯ ಕಾರ್ಯದರ್ಶಿ ನೇಮು ಕೊಟ್ಟಾರಿ ಮಾತನಾಡಿ, ಗುಜ್ಜರಕೆರೆಯ ನೀರಿನ ಶುದ್ಧತೆಯ ಬಗ್ಗೆ ದೃಢೀಕರಿಸಲು ನಿರಂತರ ನೀರಿನ ಸ್ಯಾಂಪಲ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸ್ಯಾಂಪಲ್ನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಅಂಶ ಇರುವುದು ಪತ್ತೆಯಾಗಿದೆ. ಈ ನೀರು ಸೇವನೆಗೆ ಯೋಗ್ಯವಾಗಿಲ್ಲ ಎಂದು ವರದಿ ಬಂದಿದೆ ಎಂದರು.
ಕೋಟ್ಯಂತರ ರೂಪಾಯಿ ಹಣ ಸುರಿದು ಅಭಿವೃದ್ಧಿಗೊಂಡಿರುವ ಗುಜ್ಜರಕೆರೆಗೆ ಕೊಳಚೆ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಅಂಶಗಳು ಹೆಚ್ಚಳವಾಗುತ್ತಿವೆ. ಕೆರೆಯನ್ನು ಸಂಪೂರ್ಣ ಮುಚ್ಚಿದ್ದರೂ, ಇನ್ನೂ ಕೊಳಚೆ ನೀರು ನಿರಂತರವಾಗಿ ಕೆರೆಗೆ ಹರಿಯುತ್ತಲೇ ಇದ್ದು, ಈ ಸಂಪರ್ಕ ಕೊಂಡಿಯನ್ನು ಸ್ಥಗಿತಗೊಳಿಸುವ ಕಾರ್ಯ ಆಗಬೇಕಿದೆ ಎಂದು ತಿಳಿಸಿದರು.
ಓದಿ: 'ಎಲ್ಲರನ್ನೂ ಬಿಟ್ಟು ಬಾ, ಇಲ್ಲವೇ...'! ಬಂಟ್ವಾಳದಲ್ಲಿ ಬಾಲಕಿ ಆತ್ಮಹತ್ಯೆ; ತಂದೆ ಹೇಳಿದ್ದೇನು?