ಮಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿವೆ. ಕಳೆದ 2 ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿದ್ದವು. ಈ ಬೆನ್ನಲ್ಲೇ ಇದೀಗ ಮತ್ತೊಂದು ಒಮಿಕ್ರಾನ್ ಕೇಸ್ ಪತ್ತೆಯಾಗಿರುವುದರಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಎರಡು ದಿನಗಳ ಹಿಂದೆ ಮಂಗಳೂರಿನ ಕುರ್ನಾಡುವಿನ ಜೆಎನ್ವಿ ಶಾಲೆಯಲ್ಲಿ ನಾಲ್ಕು ಮತ್ತು ಶ್ರೀನಿವಾಸ ನರ್ಸಿಂಗ್ ಕಾಲೇಜಿನಲ್ಲಿ ಒಬ್ಬರಿಗೆ ಒಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿತ್ತು. ಇಂದು ಶ್ರೀನಿವಾಸ ನರ್ಸಿಂಗ್ ಕಾಲೇಜಿನ ಮತ್ತೋರ್ವ ವಿದ್ಯಾರ್ಥಿನಿಗೆ ರೂಪಾಂತರಿ ತಳಿ ಒಮಿಕ್ರಾನ್ ತಗುಲಿರುವುದು ದೃಢಪಟ್ಟಿದೆ.
ಶ್ರೀನಿವಾಸ ನರ್ಸಿಂಗ್ ಕಾಲೇಜಿನ 19 ವಿದ್ಯಾರ್ಥಿಗಳಿಗೆ ಡಿಸೆಂಬರ್ 9 ರಂದು ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ಇವರ ಮಾದರಿಯನ್ನು ಜಿನೋಮಿಕ್ ಅಧ್ಯಯನಕ್ಕೆ ಕಳುಹಿಸಲಾಗಿತ್ತು. ಇದರಲ್ಲಿ ಓರ್ವ ವಿದ್ಯಾರ್ಥಿನಿಗೆ ಶನಿವಾರ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇಂದು ಮತ್ತೋರ್ವ ವಿದ್ಯಾರ್ಥಿನಿಗೆ ಒಮಿಕ್ರಾನ್ ಇರುವುದು ಗೊತ್ತಾಗಿದೆ.
ಓದಿ: Mangalore college Covid: ಮಂಗಳೂರಿನಲ್ಲಿ ಮೂರನೇ ನರ್ಸಿಂಗ್ ಕಾಲೇಜ್ನಲ್ಲಿ ಕೊರೊನಾ ಸೋಂಕು
ಇಂದು ಒಮಿಕ್ರಾನ್ ಸೋಂಕು ದೃಢಪಟ್ಟಿರುವ ವಿದ್ಯಾರ್ಥಿನಿ ಆರೋಗ್ಯವಾಗಿದ್ದಾಳೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ವಿದ್ಯಾರ್ಥಿನಿ ಸೇರಿದಂತೆ ಇತ್ತೀಚೆಗೆ ಒಮಿಕ್ರಾನ್ ಪತ್ತೆಯಾದ ವಿದ್ಯಾರ್ಥಿಗಳಿಗೆ ಟ್ರಾವೆಲ್ ಹಿಸ್ಟರಿ ಇಲ್ಲದೆ ಇದ್ದರೂ ವೈರಸ್ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.