ದಕ್ಷಿಣ ಕನ್ನಡ: ಉಳ್ಳಾಲ ಠಾಣೆಯ ಪೊಲೀಸರ ಸಂಪರ್ಕದಿಂದಾಗಿ ಒಟ್ಟು 16 ಜನರಿಗೆ ಸೋಂಕು ತಗುಲಿದ್ದು, ಅವರಲ್ಲಿ ಉಳ್ಳಾಲ ಪೊಲೀಸ್ ಠಾಣೆಯ 10 ಸಿಬ್ಬಂದಿ, ಇಬ್ಬರು ಹೋಮ್ಗಾರ್ಡ್, ಇನ್ನೋರ್ವ ಮಂಗಳೂರು ಗ್ರಾಮಾಂತರ ಠಾಣಾ ಸಿಬ್ಬಂದಿ ಸೇರಿ ಮೂವರು ಕೊಲೆ ಯತ್ನ ಸಂಬಂಧ ಬಂಧಿತರಾಗಿ ವಿಚಾರಣೆಗೆ ಹಾಜರಾಗಿದ್ದ ಆರೋಪಿಗಳಿಗೂ ಸೋಂಕು ಹರಡಿದೆ.
ಈ ಹಿನ್ನೆಲೆ ಉಳ್ಳಾಲದಾದ್ಯಂತ ಇರುವ ರಿಕ್ಷಾ ಚಾಲಕರು, ಮೀನು ಮಾರುವವರು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಸಾರ್ವಜನಿಕರ ಗಂಟಲು ದ್ರವ ತೆಗೆದುಕೊಳ್ಳಲಾಗಿದೆ. ಒಟ್ಟು 120 ಮಂದಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. ಉಳ್ಳಾಲ ನಗರಸಭೆ ಆವರಣದಲ್ಲಿ ಇಂದು ಪ್ರೋಗ್ರಾಂ ಆಫೀಸರ್ ಡಾ. ರತ್ನಾಕರ್, ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಪ್ರಶಾಂತ್ ಅಮೀನ್ ನೇತೃತ್ವದಲ್ಲಿ ಸ್ವಾಬ್ ಟೆಸ್ಟ್ ನಡೆಯಿತು. ನಾಳೆ ಕೋಡಿ ಮಸೀದಿ ಆವರಣದಲ್ಲಿ ಸ್ವ್ಯಾಬ್ ಟೆಸ್ಟ್ ನಡೆಯಲಿದೆ.
ಕ್ವಾರಂಟೈನ್ನಲ್ಲಿದ್ದ ಸಿಬ್ಬಂದಿಗೆ ಆಹಾರ ಒದಗಿಸಿದ ಪೊಲೀಸರು
ಮಧ್ಯರಾತ್ರಿ ಭಾರೀ ಮಳೆಯ ಮಧ್ಯೆಯೇ ಆಹಾರ ಸಾಮಗ್ರಿ ಪೂರೈಸುವ ಮೂಲಕ ಕೊರೊನಾದಿಂದ ತತ್ತರಿಸಿರುವ ಉಳ್ಳಾಲ ಠಾಣೆಯ ಸಹೋದ್ಯೋಗಿಗಳಿಗೆ ಮೂಡಬಿದ್ರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ದಿನೇಶ್ ಮತ್ತು ತಂಡ ನೆರವಾದರು. ಉಳ್ಳಾಲ ಪೊಲೀಸ್ ಠಾಣೆಯ ಕ್ವಾರಂಟೈನ್ ಸಿಬ್ಬಂದಿಗೆ ಆಹಾರ ಸಾಮಗ್ರಿ ಪೂರೈಸಿದ ತಂಡ, ತಡರಾತ್ರಿ ಅದಕ್ಕೆಂದೇ 50 ಕಿ.ಮೀ ದೂರದ ಮೂಡಬಿದ್ರೆ ಠಾಣೆಯಿಂದ ಆಗಮಿಸಿ ದಿನಬಳಕೆ ಸಾಮಗ್ರಿಗಳನ್ನು ನೀಡಿದರು.
ಈಗಾಗಲೇ ಉಳ್ಳಾಲ ಠಾಣೆಯ 12 ಮಂದಿ ಸಿಬ್ಬಂದಿಗೆ ಕೊರೊನಾ ತಗುಲಿದೆ. ಉಳಿದ ಸಿಬ್ಬಂದಿ ಉಳ್ಳಾಲದ ಖಾಸಗಿ ಕಟ್ಟಡದಲ್ಲಿ ಕ್ವಾರಂಟೈನ್‍ನಲ್ಲಿದ್ದಾರೆ. ಪೊಲೀಸರ ಸಂಕಷ್ಟಕ್ಕೆ ಸ್ಪಂದಿಸಿದ ಇನ್ಸ್ಪೆಕ್ಟರ್ ಬಗ್ಗೆ ಉಳ್ಳಾಲ ಪೊಲೀಸರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.