ಮಂಗಳೂರು: ಹಲವಾರು ದಿನಗಳಿಂದ ಸೆಂಟ್ರಲ್ ಮಾರುಕಟ್ಟೆಯಿಂದ ಸ್ಥಳಾಂತರಗೊಳ್ಳಲು ಹಿಂದೇಟು ಹಾಕುತ್ತಿದ್ದ ವ್ಯಾಪಾರಿಗಳು ಕೊನೆಗೂ ಸ್ಥಳಾಂತರಗೊಂಡಿದ್ದು, ಇಂದಿನಿಂದ ಬೈಕಂಪಾಡಿಯ ಎಪಿಎಂಸಿಯಲ್ಲಿ ವ್ಯಾಪಾರ ಆರಂಭಿಸಿದ್ದಾರೆ.
ಕೊರೊನಾ ಸೋಂಕು ಹರಡದಂತೆ ಸಾಮಾಜಿಕ ಅಂತರ ಕಾಪಾಡುವ ಹಿನ್ನೆಲೆಯಲ್ಲಿ ಮಂಗಳೂರಿನ ತರಕಾರಿ ಹಾಗೂ ಹಣ್ಣಿನ ವ್ಯಾಪಾರವನ್ನು ಬೈಕಂಪಾಡಿಯ ಎಪಿಎಂಸಿಗೆ ಸ್ಥಳಾಂತರ ಮಾಡಬೇಕೆಂದು ಜಿಲ್ಲಾಡಳಿತ ಹಲವಾರು ಬಾರಿ ವ್ಯಾಪಾರಿಗಳ ಮನವೊಲಿಕೆ ಮಾಡಲು ಪ್ರಯತ್ನಪಟ್ಟಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಇದೀಗ ವ್ಯಾಪಾರಿಗಳು ಎಪಿಎಂಸಿಗೆ ಸ್ಥಳಾಂತರಗೊಳ್ಳಲು ಒಪ್ಪಿಕೊಂಡಿದ್ದು, ಇಂದಿನಿಂದ ವ್ಯಾಪಾರ ಆರಂಭಿಸಿದ್ದಾರೆ.
ನಗರ ಪಾಲಿಕೆ ವ್ಯಾಪ್ತಿಯೊಳಗಿನ ಉದ್ದಿಮೆ ಪರವಾನಗಿ ಹೊಂದಿರುವ ಎಲ್ಲಾ ತರಕಾರಿ ಮತ್ತು ಹಣ್ಣು ಹಂಪಲು ಚಿಲ್ಲರೆ ವ್ಯಾಪಾರಸ್ಥರು ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ನಲ್ಲಿ ತೆರೆದಿರುವ ಹಾಪ್ ಕಾಮ್ಸ್ ಅಥವಾ ಇತರ ಸಗಟು ವ್ಯಾಪಾರಿಗಳಿಂದ ಮಾತ್ರವೇ ತರಕಾರಿ ಮತ್ತು ಹಣ್ಣು ಹಂಪಲು ಖರೀದಿಸಬೇಕು ಎಂದು ಮಂಗಳೂರು ನಗರ ಪಾಲಿಕೆ ಆಯುಕ್ತರು ಸೂಚನೆ ನೀಡಿದ್ದಾರೆ.
ಈ ಬಗ್ಗೆ ಪಾಲಿಕೆ ವತಿಯಿಂದ ತಪಾಸಣೆ ಮಾಡಲು ಬರುವ ಸಂದರ್ಭ ಎಪಿಎಂಸಿ ಯಾರ್ಡ್ನಿಂದ ಖರೀದಿಸಿದ ರಸೀದಿಯನ್ನು ಹಾಗೂ ನಿಗದಿತ ವಸ್ತುಗಳ ದಾಸ್ತಾನು ವಹಿಯನ್ನು ಹಾಜರುಪಡಿಸಬೇಕು. ಈ ನಿರ್ದೇಶನ ಉಲ್ಲಂಘಿಸಿದಲ್ಲಿ ಪಾಲಿಕೆ ವತಿಯಿಂದ ನೀಡಲಾಗಿರುವ ಉದ್ದಿಮೆ ಪರವಾನಗಿಯನ್ನು ಶಾಶ್ವತವಾಗಿ ರದ್ದುಗೊಳಿಸಲಾಗುವುದು ಎಂದು ಮನಪಾ ಆಯುಕ್ತರು ಖಡಕ್ ವಾರ್ನಿಂಗ್ ನೀಡಿದ್ದಾರೆ.