ಮಂಗಳೂರು: ಮಂಗಳೂರು ಮನಪಾ ಸಾಮಾನ್ಯ ಸಭೆ ಬಹಿಷ್ಕರಿಸಿ ಹೊರನಡೆದ ಕಾಂಗ್ರೆಸ್ ಸದಸ್ಯರು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು.
ನೂತನ ಮೇಯರ್ ಆಯ್ಕೆಯಾದ ಬಳಿಕ ಮನಪಾ ಪಾಲಿಕೆಯ ಮೊದಲ ಸಾಮಾನ್ಯ ಸಭೆ ಬುಧವಾರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಜರುಗಿತು. ಈ ಸಂದರ್ಭ ಮೇಯರ್ ಪ್ರೇಮಾನಂದ ಶೆಟ್ಟಿ ಎಲ್ಲರನ್ನೂ ಸ್ವಾಗತಿಸಿ, ನೂತನ ವಿಪಕ್ಷ ನಾಯಕ ಎ.ಸಿ.ವಿನಯ್ ರಾಜ್ ಅವರನ್ನು ಸ್ವಾಗತಿಸಿಲ್ಲ ಎಂದು ನಿರ್ಗಮಿತ ವಿಪಕ್ಷ ನಾಯಕ ಅಬ್ದುಲ್ ರವೂಫ್ ಆಕ್ಷೇಪ ಎತ್ತಿದರು.
ಇದಕ್ಕೆ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಪ್ರತಿಕ್ರಿಯಿಸಿ, ಸಂಪ್ರದಾಯದಂತೆ ಮೇಯರ್, ಉಪ ಮೇಯರ್ ಹಾಗೂ ಅಧ್ಯಕ್ಷರ ಚುನಾವಣೆ ಬಳಿಕ ಸಹಜವಾಗಿ ಪ್ರತಿಪಕ್ಷದಲ್ಲಿ ದೊಡ್ಡ ಪಕ್ಷವೊಂದರ ಸದಸ್ಯರಲೊಬ್ಬರು ವಿಪಕ್ಷ ನಾಯಕರಾಗಿ ಆಯ್ಕೆ ಮಾಡಿ, ಪ್ರತಿಪಕ್ಷದ ಕೊಠಡಿಯಲ್ಲಿ ಅಧಿಕಾರ ಸ್ವೀಕರಿಸಲಾಗುತ್ತದೆ. ಆ ಬಳಿಕ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಮೇಯರ್ ಮುಖ್ಯ ಸಚೇತಕರು ಹಾಗೂ ವಿಪಕ್ಷ ನಾಯಕರನ್ನು ಘೋಷಣೆ ಮಾಡುವುದು ಪದ್ಧತಿ. ಆದರೆ, ಕಾಂಗ್ರೆಸ್ ತಮ್ಮ ಜಿಲ್ಲಾಧ್ಯಕ್ಷರ ಮೂಲಕ ಮನಪಾ ಆಯುಕ್ತರಿಗೆ ಪತ್ರ ಮುಖೇನ ತಮ್ಮ ಸದಸ್ಯರಲ್ಲೊಬ್ಬರಾದ ಎ.ಸಿ.ವಿನಯ್ ರಾಜ್ ಅವರನ್ನು ಆಯ್ಕೆ ಮಾಡಿ, ಅವರನ್ನೇ ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಬೇಕೆಂದು ಮನವಿ ಮಾಡಿದೆ.
ಸಹಜವಾಗಿ ಅದು ಕಡತ ರೂಪದಲ್ಲಿ ತಮ್ಮನ್ನು ತಲುಪಿದ್ದು, ಅಲ್ಲಿ ಸ್ಪಷ್ಟವಾಗಿ ಕಾನೂನಿನ ಉಲ್ಲೇಖಗಳನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ನನಗೆ ಯಾವುದೇ ಕಾರಣದಿಂದ ವಿಪಕ್ಷ ನಾಯಕರ ಆಯ್ಕೆಯನ್ನು ಮಾನ್ಯತೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸದ್ಯದ ಮಟ್ಟಿಗೆ ಈ ಆಯ್ಕೆ ಕಾಯ್ದಿರಿಸಲಾಗುತ್ತದೆ. ಆದ್ದರಿಂದ ಇಂದು ಅಧಿಕೃತವಾಗಿ ಪ್ರತಿಪಕ್ಷದ ನಾಯಕರಿಗೆ ಮಾನ್ಯತೆ ನೀಡಲು ಸಾಧ್ಯವಾಗಿಲ್ಲ ಎಂದು ಮೇಯರ್ ಹೇಳಿದರು.
ಕಾಂಗ್ರೆಸ್ ಸದಸ್ಯರು, ವಿಪಕ್ಷ ನಾಯಕರಾಗಿ ಎ.ಸಿ.ವಿನಯ್ ರಾಜ್ ಅವರನ್ನು ಪರಿಗಣಿಸಬೇಕೆಂದು ಸಾಕಷ್ಟು ಒತ್ತಾಯಿಸಿದರೂ, ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಯಾವುದೇ ರೀತಿಯಲ್ಲಿ ಸ್ಪಂದನೆ ನೀಡಲಿಲ್ಲ. ಈ ಬಗ್ಗೆ ಸಾಕಷ್ಟು ಗದ್ದಲ ನಡೆದ ಬಳಿಕ ಕಾಂಗ್ರೆಸ್ ಸಭೆ ಬಹಿಷ್ಕರಿಸಿ ಹೊರನಡೆಯಿತು. ಬಳಿಕ ಸಾಮಾನ್ಯ ಸಭೆ ನಡೆಯುವ ಸಭಾಂಗಣದ ಹೊರಗಡೆ ಬಿಜೆಪಿಗೆ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ಓದಿ: ಸಿಎಂ ವಿರುದ್ಧ ಗುಡುಗು: ಶಾಸಕ ಯತ್ನಾಳ್ ಹಾದಿ ಹಿಡಿದರಾ ಸಚಿವ ಈಶ್ವರಪ್ಪ!?