ಕಡಬ: ತಾಲೂಕಿನ ಕೋಡಿಂಬಾಳ ಪೇಟೆಯಿಂದ ಅರ್ಧ ಕಿ.ಮೀ. ದೂರದ ಉಜಿರಡ್ಕ ಎಂಬಲ್ಲಿ ಸುಮಾರು ಇಪ್ಪತ್ತು ವರ್ಷ ವಯಸ್ಸಿನ ಬೃಹತ್ ಗಾತ್ರದ ಕಾಳಿಂಗ ಸರ್ಪ ಪತ್ತೆಯಾಗಿತ್ತು. ಇದನ್ನು ಉರಗ ತಜ್ಞರ ಸಹಾಯದೊಂದಿಗೆ ಹಿಡಿದು ಕಾಡಿಗೆ ಬಿಡಲಾಗಿದೆ.
ಉಜಿರಡ್ಕದ ಸುಂದರ ಎಂಬುವವರ ಮನೆಯ ಸಮೀಪದಲ್ಲಿದ್ದ ಕಟ್ಟಿಗೆಯ ರಾಶಿಯ ನಡುವೆ ಸುಮಾರು 15-18 ಅಡಿ ಉದ್ದದ ಕಾಳಿಂಗ ಸರ್ಪವು ಯಾವುದೋ ಪ್ರಾಣಿಯನ್ನು ಬೇಟೆಯಾಡುವ ಸಲುವಾಗಿ ಓಡಿಸಿಕೊಂಡು ಬಂದು ಸೇರಿಕೊಂಡಿತ್ತು. ಇದನ್ನು ಗಮನಿಸಿದ ಮನೆಯವರು ಸಾರ್ವಜನಿಕರ ಸಹಾಯದೊಂದಿಗೆ ಪಂಜ ವಲಯ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದರು.
ಬಳಿಕ ಕುಕ್ಕೆ ಸುಬ್ರಹ್ಮಣ್ಯದ ಉರಗ ತಜ್ಞ ಮಾಧವ ಎಂಬುವವರನ್ನು ಸಂಪರ್ಕಿಸಲಾಯಿತು. ಮಾಧವ ಅವರು ಸ್ಥಳಕ್ಕೆ ಆಗಮಿಸಿ ಸುರಕ್ಷಿತವಾಗಿ ಬೃಹತ್ ಕಾಳಿಂಗ ಸರ್ಪವನ್ನು ಹಿಡಿದರು. ನಂತರ ಇಲಾಖೆಯ ವಾಹನದ ಮೂಲಕ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಬಿಸಿಲೆಘಾಟ್‌ಗೆ ಕಾಳಿಂಗ ಸರ್ಪವನ್ನು ಕೊಂಡೊಯ್ಯಲಾಯಿತು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಮಾಡಲು ಸಿದ್ಧ: ಸಿಎಂ ಬೊಮ್ಮಾಯಿ
ಈ ಸಂದರ್ಭದಲ್ಲಿ ಪಂಜ ವಲಯದ ಉಪವಲಯ ಅರಣ್ಯಾಧಿಕಾರಿ ಅಜಿತ್, ಅರಣ್ಯ ರಕ್ಷಕರುಗಳಾದ ವಿಶ್ವನಾಥ, ಸುಬ್ರಹ್ಮಣ್ಯ, ದೇವಿಪ್ರಸಾದ್ ಹಾಗೂ ಸ್ಥಳೀಯ ಪ್ರಮುಖರಾದ ರಘುರಾಮ ಕುಕ್ಕರೆಬೆಟ್ಟು, ಉಪಸ್ಥಿತರಿದ್ದರು. ಬೃಹತ್ ಹಾವು ಬಂದ ಸುದ್ದಿ ತಿಳಿಯುತ್ತಲೇ ಅದನ್ನು ನೋಡಲು ನೂರಾರು ಮಂದಿ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದರು.