ಮಂಗಳೂರು: ಭದ್ರತೆಯ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಹಾಗೂ ಭದ್ರತಾ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅಲ್ಲದೆ ನಮ್ಮ ಆಂತರಿಕ ಭದ್ರತೆಗೆ ಜನಸಾಮಾನ್ಯರ ಸಹಕಾರವೂ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀಲಂಕಾ ಘಟನೆಯಿಂದ ನಮಗೂ ಬೇಸರವಾಗಿದ್ದು, ಈ ರೀತಿಯ ಕೃತ್ಯ ಮತ್ತೆಲ್ಲಿಯೂ ನಡೆಯಬಾರದು. ಈ ಹಿನ್ನೆಲೆಯಲ್ಲಿ ಯಾರಾದರೂ ಹೊಸಬರು ಬಂದಾಗ ಅವರ ಹಿನ್ನೆಲೆ ಸಂಗ್ರಹಿಸುವುದು ಅಗತ್ಯ. ಅಲ್ಲದೆ ಹೊಸಬರಿಗೆ ಬಾಡಿಗೆ ಮನೆ ಕೊಡುವಾಗಲೂ ಅವರ ಸಂಪೂರ್ಣ ಮಾಹಿತಿ ಸಂಗ್ರಹಿಸುವುದು ಮಾಲೀಕರ ಜವಾಬ್ದಾರಿ. ಅಲ್ಲದೆ ಹೊಸಬರ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆಯುವುದು ಅಥವಾ ಪೊಲೀಸರಿಗೆ ಮಾಹಿತಿ ತಿಳಿಸುವುದು ಉತ್ತಮ ಎಂದರು.
ಇನ್ನು ಮಂಗಳೂರಲ್ಲಿ ನೀರಿನ ಸಮಸ್ಯೆಯಿಂದ ಶಾಸಕ ವೇದವ್ಯಾಸ ಕಾಮತ್ ಮತ್ತು ತಮಗೆ ವೈಮನಸ್ಸು ಉಂಟಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನನಗೆ ವೈಯಕ್ತಿಕವಾಗಿ ವೇದವ್ಯಾಸ ಕಾಮತ್ ಆತ್ಮೀಯರು. ಆದರೆ ಎಲ್ಲ ರೀತಿಯಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಜನರಿಗೆ ಎಲ್ಲಾ ತಿಳಿದಿದೆ. ಅವರು ಹೇಳಿದ ತಕ್ಷಣ ಎಲ್ಲವನ್ನೂ ಯಾರೂ ನಂಬುವುದಿಲ್ಲ. ಇವರು ಶಾಸಕರಾಗಿ ಒಂದು ವರ್ಷದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಏನು ಮಾಡಿದ್ದಾರೆ. ನಾವು ಹಲವು ಸಭೆ ಮಾಡಿದಾಗಲೂ ಯಾವುದಕ್ಕೂ ಅವರು ಹಾಜರಾಗಿಲ್ಲ ಎಂದು ಆರೋಪಿಸಿದರು.
ನೀರಿನ ಸಮಸ್ಯೆ ಬಂದಾಗ ಡ್ಯಾಂನಲ್ಲಿ ನೀರಿನ ಮಟ್ಟ ನೋಡಲು ಇವರು ನೇರವಾಗಿ ಹೋಗಿದ್ದಾರೆಯೇ ಹೊರತು, ಜಿಲ್ಲಾ ಉಸ್ತುವಾರಿ ಸಚಿವನಾದ ನನ್ನಲ್ಲಿ ಒಂದು ಮಾತು ತಿಳಿಸಿಲ್ಲ. ಆದರೆ ನಾನೇ ಖುದ್ದಾಗಿ ಕರೆ ಮಾಡಿ, ನೀರಿನ ಸಮಸ್ಯೆಯ ನಿವಾರಣೆಗೆ ಅವರ ಸಲಹೆ ಕೇಳಿದ್ದೇನೆ ಎಂದು ಸಚಿವ ಖಾದರ್ ತಿಳಿಸಿದರು.