ಮಂಗಳೂರು: ಪ್ರೀತಿ ನಿರಾಕರಿಸಿದಳೆಂದು ತನ್ನ ಸಹಪಾಠಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ವಿವರ:
ಅಬೂಬಕರ್ ಸಿದ್ದಿಕ್ (21) ಬಂಧಿತ ಆರೋಪಿ. ಸಂತ್ರಸ್ತ ಯುವತಿ ಹಾಗೂ ಅಬೂಬಕರ್ ಸಿದ್ದಿಕ್ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದರು. 2019ರಲ್ಲಿ ನಡೆದಿದ್ದ ಕಾಲೇಜು ಬೀಳ್ಕೊಡುಗೆ ಸಮಾರಂಭದಲ್ಲಿ ಇಬ್ಬರು ಜೊತೆಯಾಗಿ ನಿಂತು ಫೋಟೋ ತೆಗೆಸಿಕೊಂಡಿದ್ದರು. ಈ ಫೋಟೋವನ್ನು ಮುಂದಿಟ್ಟುಕೊಂಡು ಆರೋಪಿ ಅಬೂಬಕರ್ ಸಿದ್ದಿಕ್ ಯುವತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಪ್ರೀತಿಗೆ ನಿರಾಕರಿಸಿದಲ್ಲಿ ಇಬ್ಬರೂ ಜೊತೆಯಾಗಿ ತೆಗೆದುಕೊಂಡ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸುತ್ತಿದ್ದ ಎನ್ನಲಾಗಿದೆ.
ಆದರೂ ಆಕೆ ಪ್ರೀತಿಸಲು ನಿರಾಕರಣೆ ಮಾಡಿರುವ ಹಿನ್ನೆಲೆಯಲ್ಲಿ ಡಿ.8 ರಂದು ಯುವತಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಹಿಂಬಾಲಿಸಿಕೊಂಡು ಬಂದಿರುವ ಆರೋಪಿ, ಆಕೆಯ ಮನೆಗೆ ನುಗ್ಗಿ ಆತ್ಯಾಚಾರವೆಸಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡ ಬಜ್ಪೆ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.