ಮಂಗಳೂರು: ಸ್ವಿಫ್ಟ್ ಕಾರಿನಲ್ಲಿ ಬಂದು ರಸ್ತೆ ಬದಿಯಲ್ಲಿರುವ ಬಿಡಾಡಿ ದನವನ್ನು ಕಳ್ಳತನ ಮಾಡುವ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಗರದ ಹೊರವಲಯದ ಕಟೀಲು ಸಮೀಪದ ಮೂರುಕಾವೇರಿ ಬಳಿಯಿರುವ ಮಾರಿಗುಡಿ ದೇವಳದ ಬಳಿ ಜುಲೈ 9ರ ರಾತ್ರಿ 10.24ಕ್ಕೆ ಈ ಕೃತ್ಯ ನಡೆದಿದ್ದು, ಇಂದು ಸಿಸಿ ಕ್ಯಾಮೆರಾ ದೃಶ್ಯದಿಂದ ಪ್ರಕರಣ ಬಯಲಿಗೆ ಬಂದಿದೆ.
ಮಾರಿಗುಡಿ ದೇವಳದ ಸಿಸಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಈ ದೃಶ್ಯವನ್ನು ಅಂದು ದೇವಳದ ಸಿಬ್ಬಂದಿಯೊಬ್ಬರು ನೋಡಿದ್ದಾರೆ. ಆದರೆ ಲಾಕ್‌ಡೌನ್‌ನಿಂದ ದೇವಳಕ್ಕೆ ಆಡಳಿತ ಮಂಡಳಿಯ ಯಾರೂ ಬರುತ್ತಿರಲಿಲ್ಲ. ಇಂದು ಸಂಕ್ರಮಣದ ನಿಮಿತ್ತ ಆಡಳಿತ ಮಂಡಳಿಯವರು ದೇವಳಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಯ ಮೂಲಕ ಈ ವಿಚಾರ ಬಹಿರಂಗಗೊಂಡಿದೆ.
ಸಿಸಿ ಕ್ಯಾಮರಾದಲ್ಲೇನಿದೆ?:
ನಾಲ್ಕೈದು ಬೀಡಾಡಿ ದನಗಳು ಕುಳಿತಿರುವ ಜಾಗದಲ್ಲಿ ಕಾರೊಂದು ಬಂದು ನಿಲ್ಲುತ್ತದೆ. ಆ ಕಾರಿನಿಂದ ಇಬ್ಬರು ಮುಸುಕುಧಾರಿಗಳು ಇಳಿಯುತ್ತಾರೆ. ಅದರಲ್ಲಿ ಓರ್ವ ಒಂದು ದನಕ್ಕೆ ತಿನಿಸೊಂದನ್ನು ಹಾಕಿ ಹಿಡಿಯುತ್ತಾನೆ. ಮತ್ತೋರ್ವ ಕೈಯಲ್ಲಿರುವ ಹಗ್ಗವನ್ನು ದನದ ಕತ್ತಿಗೆ ಕಟ್ಟುತ್ತಾನೆ. ಬಳಿಕ ಇಬ್ಬರೂ ಸೇರಿ ಆ ಹಸುವನ್ನು ಬಲವಂತವಾಗಿ ಕಾರಿನೊಳಗೆ ನುಗ್ಗಿಸಿ ಕದಿಯುತ್ತಿರುವ ದೃಶ್ಯ ಸರೆಯಾಗಿದೆ.
ಈ ದನಗಳು ಹೈನುಗಾರಿಕೆ ನಡೆಸುತ್ತಿರುವ ಸ್ಥಳೀಯರೊಬ್ಬರಿಗೆ ಸೇರಿದ್ದಾಗಿದ್ದು, ಅವುಗಳು ಬಿಡಾಡಿಗಳಂತೆ ತಿರುಗಾಡುತ್ತಿದ್ದವು. ಈ ಬಗ್ಗೆ ಈವರೆಗೆ ಯಾವುದೇ ಲಿಖಿತ ದೂರು ದಾಖಲಾಗಿಲ್ಲ. ಆದರೆ ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೊಸಾರಿಯೊ ಎಂಬವರು ಮುಲ್ಕಿ ಪೊಲೀಸ್ ಠಾಣೆಗೆ ಕರೆ ಮಾಡಿ, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.