ಮಂಗಳೂರು: ಬ್ಲ್ಯಾಕ್ ಫಂಗಸ್ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆ ಕೊರೊನಾದಿಂದ ಗುಣಮುಖರಾದ ರೋಗಿಗಳ ಬಗ್ಗೆ ನಿಗಾವಹಿಸಲು ದಕ್ಷಿಣ ಕನ್ನಡ ಜಿಲ್ಲೆಯ ಕಮ್ಯುನಿಟಿ ಮೆಡಿಸಿನ್ ವಿಭಾಗದ ತಜ್ಞರ ತಂಡವನ್ನು ರಚಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಆದೇಶಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಜೊತೆಗೆ ಬ್ಲ್ಯಾಕ್ ಫಂಗಸ್ ಪತ್ತೆಯಾಗುತ್ತಿದೆ. ಅನಿಯಂತ್ರಿತ ಮಧುಮೇಹ ರೋಗದಿಂದ ಬಳಲುತ್ತಿರುವ ಕೊರೊನಾ ಸೋಂಕಿತ ರೋಗಿಗಳಲ್ಲಿ ಸ್ಟೆರಾಯ್ಡ್ ಬಳಕೆಯಿಂದ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ ಎಂದು ತಜ್ಞರು ವರದಿ ನೀಡಿದ್ದಾರೆ. ಈ ಹಿನ್ನೆಲೆ ಸ್ಟೆರಾಯ್ಡ್ ಬಳಸಿದ ಮತ್ತು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದು, ಕೊರೊನಾ ಚಿಕಿತ್ಸೆ ಪಡೆದು ಗುಣಮುಖರಾದವರು ಬ್ಲ್ಯಾಕ್ ಫಂಗಸ್ ಗೆ ತುತ್ತಾಗುವುದನ್ನು ತಡೆಗಟ್ಟಲು ಆಸ್ಪತ್ರೆಯಿಂದ ಬಿಡುಗಡೆಯಾದವರ ಬಗ್ಗೆ ನಿಗಾ ವಹಿಸಲು ಈ ತಂಡ ರಚಿಸಲಾಗಿದೆ.
ಸ್ಟೆರಾಯ್ಡ್ ಬಳಸಿದ ಮತ್ತು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದವರು ಕೊರೊನಾ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಂಡ 4 ವಾರಗಳ ಕಾಲ ಅವರ ಆರೋಗ್ಯದ ಬಗ್ಗೆ ನಿಗಾವಹಿಸಲು ಈ ತಜ್ಞರ ತಂಡ ರಚಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳ ನೋಡಲ್ ಅಧಿಕಾರಿಗಳು ತಮ್ಮ ಆಸ್ಪತ್ರೆಯಲ್ಲಿ ರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆದು ಮೇ 1 ರ ನಂತರ ಬಿಡುಗಡೆ ಹೊಂದಿರುವವರ ರೋಗಿಗಳ ಪಟ್ಟಿಯನ್ನು ಈ ತಜ್ಞರ ತಂಡಕ್ಕೆ ನೀಡುವಂತೆ ಸೂಚಿಸಲಾಗಿದೆ.