ಬಂಟ್ವಾಳ : ಎರಡು ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ಪಕ್ಷದ ವತಿಯಿಂದ ಬಂಟ್ವಾಳದಲ್ಲಿ ಮೈಸೂರು ವಿಭಾಗೀಯ ಸಮಾವೇಶ ಮುಗಿದ ಬೆನ್ನಲ್ಲೇ ಈಗ ಬಿಜೆಪಿ ಜಿಲ್ಲಾ ಮಟ್ಟದ ಜನಸೇವಕ ಸಮಾವೇಶ ನಡೆಸಲು ಸಿದ್ಧತೆ ನಡೆಸಿದೆ.
ಇದೇ ತಿಂಗಳ 11 ರಂದು ಮಧ್ಯಾಹ್ನ 3 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಂಟರ ಭವನದಲ್ಲಿ ಜಿಲ್ಲಾ ಮಟ್ಟದ ಜನಪ್ರತಿನಿಧಿಗಳು ಒಗ್ಗೂಡುವ ಜನಸೇವಕ ಸಮಾವೇಶಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.
ಸುಮಾರು 3 ಸಾವಿರ ಮಂದಿ ಜನಪ್ರತಿನಿಧಿಗಳು ಭಾಗವಹಿಸುವ ಕಾರ್ಯಕ್ರಮದಲ್ಲಿ ಸಚಿವ ಕೆ ಎಸ್ ಈಶ್ವರಪ್ಪ, ಸಿ ಟಿ ರವಿ, ರವಿಕುಮಾರ್, ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಹಾಗೂ ಪಕ್ಷದ ನಾಯಕರು ಭಾಗವಹಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪಕ್ಷದ ಜಿಲ್ಲೆಯ ಎಲ್ಲ ಶಾಸಕರು ಉಪಸ್ಥಿತರಿರುವರು ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಹೇಳಿದರು.
ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾದ ಬಳಿಕ ಹೊಸ ಹುರುಪಿನಿಂದ ಬಿಜೆಪಿ ಕೆಲಸ ಮಾಡುತ್ತಿದೆ. ಗ್ರಾಪಂಗೆ ಪೂರಕವಾಗಿ ಕುಟುಂಬ ಮಿಲನ ಮತ್ತು ಗ್ರಾಮ ಸ್ವರಾಜ್ಯ ಸಮಾವೇಶ, ಮಹಾಶಕ್ತಿ ಕೇಂದ್ರದಿಂದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ನಡೆಸುವ ಮೂಲಕ ನಾಲ್ಕು ತಿಂಗಳ ಮೊದಲೇ ಗ್ರಾಪಂ ಚುನಾವಣೆಗೆ ಸಜ್ಜಾಗಿದ್ದರ ಪರಿಣಾಮ ಬೆಂಬಲಿತರು ವಿಜಯ ಸಾಧಿಸಿದ್ದಾರೆ.
ಓದಿ-ಕೋವಿಡ್ ಮೊದಲ ಚುಚ್ಚುಮದ್ದು ಪಡೆದ ಸೌದಿ ಅರೇಬಿಯಾ ದೊರೆ ಸಲ್ಮಾನ್!
ಗೆದ್ದವರು ಜನಸೇವಕರಾಗಿ ಕೆಲಸ ಮಾಡಬೇಕು ಹಾಗೂ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿ ಮುನ್ನಡೆಯಬೇಕು ಎಂಬ ನಿಟ್ಟಿನಲ್ಲಿ ಜನಸೇವಕ ಸಮಾವೇಶವನ್ನು ಇಡೀ ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.
ರಾಜ್ಯದಲ್ಲಿ 5 ತಂಡಗಳು 37 ಸಂಘಟನಾ ಜಿಲ್ಲೆಗೆ ಪ್ರವಾಸ ಮಾಡಲಿದ್ದಾರೆ. ಜಿಲ್ಲೆಗೆ ಬಂಟ್ವಾಳ ಕೇಂದ್ರ ಸ್ಥಾನ. ಈ ಹಿನ್ನೆಲೆ ಈ ಭಾಗದಲ್ಲಿ ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮಾವೇಶವನ್ನು ವ್ಯವಸ್ಥಿತವಾಗಿ ಮಾಡಲಾಗುವುದು ಎಂದರು.
ಜಿಲ್ಲೆಯ 145 ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ್ರೆ, ಅತಂತ್ರ, ಸಮಬಲ ಇರುವ 28 ಪಂಚಾಯತ್‌ಗಳಲ್ಲಿ 15 ಬಿಜೆಪಿ ಬೆಂಬಲಿತರಿಗೆ ದೊರಕಲಿವೆ ಎಂದು ಹೇಳಿದ ಅವರು, ಕಾಂಗ್ರೆಸ್ ಮುಳುಗುವ ಹಡಗಾಗಿದೆ. ಬಿಜೆಪಿಯತ್ತ ಎಲ್ಲರ ಗಮನ ನೆಟ್ಟಿದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ, ರವೀಶ ಶೆಟ್ಟಿ ಕಾರ್ಕಳ, ಮಾಧ್ಯಮ ಪ್ರಮುಖ್ ರಂಜಿತ್ ಮೈರ ಉಪಸ್ಥಿತರಿದ್ದರು.