ಮಂಗಳೂರು : ವಿಟ್ಲ ಪಟ್ಟಣ ಪಂಚಾಯತ್ ಪ್ರತಿಪಕ್ಷದ ಮಾಜಿ ನಾಯಕ, ಕಾಂಗ್ರೆಸ್ ಮುಖಂಡ ಅಶೋಕ್ ಕುಮಾರ್ ಶೆಟ್ಟಿ ಮತ್ತು ಮಾಣಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಪ್ರಮುಖ ರಾಜೇಶ್ ಕುಮಾರ್ ಬಾಳೆಕಲ್ಲು ಅವರು ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು. ರಾಜೇಶ್ ಬಾಳೆಕಲ್ಲು ಬಿಜೆಪಿ ಸೇರ್ಪಡೆ ವಿರೋಧಿಸಿ ಸ್ವತಃ ಬಿಜೆಪಿ ಕಾರ್ಯಕರ್ತರೇ ಘೋಷಣೆ ಕೂಗಿದರು.
ಕಬಕದಲ್ಲಿ ನಡೆದ ಪುತ್ತೂರು ಗ್ರಾಮಾಂತರ ಬಿಜೆಪಿ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ನಾಯಕರು ಬಿಜೆಪಿ ಸೇರ್ಪಡೆಗೊಂಡರು. ರಾಜೇಶ್ ಬಾಳೆಕಲ್ಲು ಅವರನ್ನು ಈ ಹಿಂದೆ ಕಾಂಗ್ರೆಸ್ ಪಕ್ಷ ಉಚ್ಚಾಟಿಸಿತ್ತು. ಅಶೋಕ್ ಶೆಟ್ಟಿ ಮತ್ತು ರಾಜೇಶ್ ಅವರು ಈ ಹಿಂದೆ ಬಿಜೆಪಿ ಪಾಳೆಯದಲ್ಲಿ ಗುರುತಿಸಿಕೊಂಡಿದ್ದು, ಇಂದು ಅಧಿಕೃತವಾಗಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಎಸ್ ಅಂಗಾರ, ವಿಧಾನ ಪರಿಷತ್ ಅಭ್ಯರ್ಥಿ, ಪುತ್ತೂರು ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು.
ರಾಜೇಶ್ ಬಾಳೆಕಲ್ಲು ಬಿಜೆಪಿ ಸೇರ್ಪಡೆ ಕುರಿತು ಮಾಣಿಲದ ಕೆಲವು ಬಿಜೆಪಿ ಕಾರ್ಯಕರ್ತರಿಗೆ ಮುಜುಗರ ಉಂಟಾಗಿತ್ತು. ಇದರಿಂದ ಒಂದು ಕಡೆ ರಾಜೇಶ್ ಗೆ ಬೆಂಬಲ ಸೂಚಿಸಿದರೆ ಇನ್ನೊಂದೆಡೆ ಧಿಕ್ಕಾರ ಕೂಗಲಾಗಿದೆ.