ಬಂಟ್ವಾಳ: ಕೊರೊನಾ ಕಾಲಘಟ್ಟದಲ್ಲಿ ಜನರನ್ನು ಕಾಂಗ್ರೆಸ್ ದಾರಿ ತಪ್ಪಿಸುತ್ತಿದೆ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಸರ್ಕಾರದೊಂದಿಗೆ ನಿಲ್ಲಬೇಕಾದ ಕಾಂಗ್ರೆಸ್ ಜನರ ದಾರಿ ತಪ್ಪಿಸುವ ಢೋಂಗಿ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಓದಿ: ಪ್ರತಿಜ್ಞಾ ವಿಧಿ ಬೋಧಿಸಿ ದಿನಸಿ ಕಿಟ್ ವಿತರಣೆ: ಆಪ್ ಪಕ್ಷದಿಂದ ವಿಶೇಷ ಜಾಗೃತಿ ಪ್ರಯತ್ನ
ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿ ಏಳು ವರ್ಷಗಳಾದ ಹಿನ್ನೆಲೆ, ಸೇವಾ ಚಟುವಟಿಕೆಯಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸೂಚನೆಯಂತೆ ಸ್ಥಾಪಿಸಿದ ಕ್ಷೇಮನಿಧಿಗೆ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಬಿ.ಸಿ. ರೋಡಿನ ರಂಗೋಲಿ ಹೋಟೆಲ್ ನಲ್ಲಿ ಭಾನುವಾರ ಚಾಲನೆ ನೀಡಿದರು.
ಆಶಾ ಕಾರ್ಯಕರ್ತರನ್ನು ದೇವರೆಂದು ಗೌರವಿಸಿದ ಹಾಗೂ ಪೌರಕಾರ್ಮಿಕರ ಕಾಲಿಗೆ ನಮಸ್ಕಾರವನ್ನು ಪ್ರಧಾನಿ ಮಾಡಿದರೆ, ಕಾಂಗ್ರೆಸ್ ನಾಯಕರು ಗಾಂಧಿ ಕುಟುಂಬದ ಕಾಲು ಹಿಡಿದಿದ್ದಾರೆ ಎಂದು ಲೇವಡಿ ಮಾಡಿದರು. ಪ್ರತಿ ಜಿಲ್ಲೆಗೆ ಮೆಡಿಕಲ್ ಕಾಲೇಜು ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುವಿಕೆಯನ್ನು ರಾಜ್ಯ ಸರ್ಕಾರ ಮಾಡಲಿದೆ. 241 ಲ್ಯಾಬ್ ರಚನೆ ರಾಜ್ಯದಲ್ಲಿ ಆಗಿದ್ದು, ಎಲ್ಲ ತಾಲೂಕು ಕೇಂದ್ರಗಳಿಗೆ ಆಕ್ಸಿಜನ್ ಘಟಕ ನಿರ್ಮಾಣ ಆಗಿದೆ. ಇದು ರಾಜ್ಯ ಸರ್ಕಾರದ ಸಾಧನೆಯಾದರೆ, ಕಾಂಗ್ರೆಸ್ ಕೇವಲ ಟೀಕೆಗಳನ್ನು ಮಾಡುತ್ತಾ ಜನರ ದಾರಿ ತಪ್ಪಿಸುತ್ತಿದೆ. ಲಸಿಕೆ ಕುರಿತು ಜನರನ್ನು ಕತ್ತಲೆಯಲ್ಲಿಟ್ಟ ಸಿದ್ದರಾಮಯ್ಯ ಮೊದಲು ಲಸಿಕೆ ತೆಗೆದುಕೊಂಡರು ಎಂದರು.
ಶಾಸಕ ರಾಜೇಶ್ ನಾಯ್ಕ್ ಕ್ಷೇಮನಿಧಿ ಕುರಿತು ಮಾಹಿತಿ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ ಉಪಸ್ಥಿತರಿದ್ದರು. ಬುಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮ ಬಗ್ಗೆ ಮಾಹಿತಿ ನೀಡಿದರು. ಬಂಟ್ವಾಳ ಪುರಸಭೆ ವ್ಯಾಪ್ತಿಯ ಪೌರಕಾರ್ಮಿಕರು, ಆಶಾ ಕಾರ್ಯಕರ್ತರಿಗೆ ಕಿಟ್ ವಿತರಿಸಲಾಯಿತು.
'ಸೇವಾ ಹಿ ಸಂಘಟನ್' ಕಾರ್ಯಕ್ರಮ:
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಏಳು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ 'ಸೇವಾ ಹಿ ಸಂಘಟನ್' ಕಾರ್ಯಕ್ರಮದಡಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರು ಗಿಡ ನೆಟ್ಟು, ದಾದಿಯರು, ಆಶಾಕಾರ್ಯಕರ್ತೆಯರಿಗೆ ಸನ್ಮಾನ ನೆರವೇರಿಸಿದರು.
ಸರಳ ಕಾರ್ಯಕ್ರಮದ ಮೂಲಕ ನಗರದ ಮಣ್ಣಗುಡ್ಡೆಯಲ್ಲಿರುವ ಗಾಂಧಿ ಪಾರ್ಕಿನಲ್ಲಿ ಗಿಡನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಿರುವ ಅವರು, ಮಣ್ಣಗುಡ್ಡ ಸರಕಾರಿ ಶಾಲೆಯಲ್ಲಿ ಕೊರೊನಾ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸುತ್ತಿರುವ ದಾದಿಯರು, ಆಶಾಕಾರ್ಯಕರ್ತೆಯರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ದೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಒಂದು ಅವಧಿಯನ್ನು ಪೂರ್ತಿಗೊಳಿಸಿ, ಎರಡನೆಯ ಅವಧಿಯನ್ನು ಇಂದಿಗೆ ಎರಡು ವರ್ಷವನ್ನು ಇವತ್ತಿಗೆ ಪೂರೈಸಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಅಭೂತಪೂರ್ವವಾದ ಸಾಧನೆ ನರೇಂದ್ರ ಮೋದಿ ಸರಕಾರದಿಂದ ಆಗಿದೆ. ಜಗತ್ತಿನಲ್ಲಿಯೇ ಭಾರತವು ಮೆಚ್ಚುಗೆಗೆ ಪಾತ್ರವಾಗುವಂತಹ ಕಾರ್ಯವನ್ನು ನರೇಂದ್ರ ಮೋದಿಯವರು ಮಾಡಿದ್ದಾರೆ. ಉಜ್ವಲಾ, ಪ್ರಧಾನಮಂತ್ರಿ ಗೃಹ ನಿರ್ಮಾಣ ಯೋಜನೆ, ಸ್ವಚ್ಛ ಭಾರತ ಯೋಜನೆ ಹೀಗೆ ಹತ್ತಾರು ಯೋಜನೆಗಳ ಮೂಲಕ ನರೇಂದ್ರ ಮೋದಿಯವರ ಸರಕಾರ ರಾಷ್ಟದಲ್ಲೂ ತನ್ನ ಛಾಪನ್ನು ಮೂಡಿಸಿ ಅತೀ ಜನಪ್ರಿಯ ಪ್ರಧಾನಿಯಾಗಿ ಎತ್ತರಕ್ಕೆ ಏರಿದ್ದಾರೆ ಎಂದು ಹೇಳಿದರು.