ಮಂಗಳೂರು: ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಅಭಿವೃದ್ಧಿ-ಸಮಸ್ಯೆಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಮೋದಿ ಹೆಸರು ಬಳಸಿಕೊಂಡು ಮತಯಾಚನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕಿಡಿಕಾರಿದರು.
ಬಿಜೆಪಿಯವರು ಅಭಿವೃದ್ಧಿ, ಕುಡಿಯುವ ನೀರು, ಮಾಲಿನ್ಯ, ಫ್ಲೈ ಓವರ್, ಅಕ್ರಮ ಟೋಲ್ ಗೇಟ್, ವಿಮಾನ ನಿಲ್ದಾಣ ಹಾಗೂ ಎನ್ಎಂಪಿಟಿ ಖಾಸಗೀಕರಣದ ಬಗ್ಗೆ ಮಾತನಾಡುತ್ತಿಲ್ಲ. ಇಷ್ಟೆಲ್ಲಾ ಪ್ರಶ್ನೆಗಳಿರುವಾಗ ಮೋದಿ ಹೆಸರು, ಹಿಂದುತ್ವ ಮತ್ತು ಹುಸಿ ದೇಶಭಕ್ತಿಗಳನ್ನು ಬಳಸಿಕೊಂಡು ಇವರು ಮತ ಕೇಳುತ್ತಿದ್ದಾರೆ ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ನಗರದಲ್ಲಿ ನಡೆದಿದ್ದ ಮೋದಿ ಚುನಾವಣಾ ಪ್ರಚಾರ ಭಾಷಣದ ಸಂದರ್ಭ ಶೇ. 5 ರಷ್ಟು ಬಿಜೆಪಿ ಧ್ವಜ ಇರಲಿಲ್ಲ. ಬದಲಿಗೆ ಭಗವಧ್ವಜ, ಕೇಸರಿ ಧ್ವಜಗಳನ್ನು ಇರಿಸಿಕೊಂಡು ಧಾರ್ಮಿಕ ಸಂಕೇತಗಳ ಮೂಲಕ ಜನರಿಂದ ಮತ ಸೆಳೆಯುವ ತಂತ್ರ ಮಾಡಿದ್ದಾರೆ. ಅಲ್ಲದೆ ಅವರ ಪ್ರಚಾರ ಭಾಷಣಕ್ಕೆ ಬಂದ ಕಾರ್ಯಕರ್ತರ ಸಮೂಹ ದ.ಕ.ಜಿಲ್ಲೆಯ ಮಟ್ಟಿಗೆ ಅತ್ಯಂತ ಅವಮಾನಕರ ರೀತಿ ವರ್ತಿಸಿದೆ ಎಂದು ಆರೋಪಿಸಿದರು.
ಇನ್ನು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ದಿಲ್ಲಿಗೆ, ಮಿಥುನ್ ರೈ ಪಳ್ಳಿ(ಮಸೀದಿ)ಗೆ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು. ಇಂತಹ ಉನ್ಮಾದ ಸ್ಥಿತಿಯಲ್ಲಿ ನಡೆಯುವ ಈ ಚುನಾವಣೆ ಖಂಡಿತವಾಗಿಯೂ ದ.ಕ. ಜಿಲ್ಲೆಯ ನೈಜ ಸಮಸ್ಯೆಗಳಿಗೆ ಯಾವುದೇ ರೀತಿಯ ಪರಿಹಾರ ನೀಡುವುದಿಲ್ಲ ಎಂದರು.
ಈ ಹಿನ್ನೆಲೆಯಲ್ಲಿ ಜಿಲ್ಲೆಯು ಈ ಸಮೂಹ ಸನ್ನಿಯಿಂದ, ಮೋದಿ, ಹಿಂದುತ್ವ ಮುಂತಾದ ಹುಸಿ ಭರವಸೆಯಿಂದ ಹೊರಬರಬೇಕು. ಈ ಬಾರಿ ಜಿಲ್ಲೆಯ ಜನ ಬಿಜೆಪಿ ವಿರುದ್ಧ ಮತ ಚಲಾಯಿಸಬೇಕು. ಜಿಲ್ಲೆಯಲ್ಲಿ ಅಭಿವೃದ್ಧಿ ಮತ್ತು ಸಾಮರಸ್ಯ ಮತ್ತೆ ನೆಲೆಗೊಳ್ಳಬೇಕು ಎಂಬ ಉದ್ದೇಶದಿಂದ ಬಿಜೆಪಿಯನ್ನು ಸೋಲಿಸಬೇಕು. ಅದೇ ರೀತಿ ಮೈತ್ರಿ ಪಕ್ಷದ ಅಭ್ಯರ್ಥಿ ಮಿಥುನ್ ರೈಯವರನ್ನು ಗೆಲ್ಲಿಸಬೇಕು ಎಂದು ಮುನೀರ್ ಕಾಟಿಪಳ್ಳ ಹೇಳಿದರು.
ಈ ಸಂದರ್ಭ ದಸಂಸ ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್, ಮೀನುಗಾರರ ಮುಖಂಡ ದಯಾನಾಥ್ ಕೋಟ್ಯಾನ್, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ರವಿಕಿರಣ ಪುಣಚ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.