ಮಂಗಳೂರು: ಮಾಜಿ ಸಿಎಂ ಕುಮಾರ ಸ್ವಾಮಿ ಅವರು ಜವಾಬ್ದಾರಿಯುತವಾಗಿ ನಡೆದುಕೊಂಡರೆ ಒಳ್ಳೆಯದು. ತಾಂಬೂಲ ಪ್ರಶ್ನೆಯ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಅವರಿಗೆ ದೊಡ್ಡ ದೊಡ್ಡ ಯಾಗಗಳನ್ನು ಮಾಡಿದ್ದಾರೆ. ಅವರು ಕೇರಳಕ್ಕೆ ಹೋಗಿ ಯಾವ ರೀತಿ ಪ್ರಶ್ನೆ ಕೇಳುತ್ತಾರೆ ಎಂಬುವುದು ಗೊತ್ತಿದೆ ಎಂದು ಶಾಸಕ ಭರತ್ ಶೆಟ್ಟಿ ಹೇಳಿದರು.
ಮಳಲಿಯಲ್ಲಿ ನಡೆದ ತಾಂಬೂಲ ಪ್ರಶ್ನಾ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು, ಮಳಲಿಯ ಮಸೀದಿ ನವೀಕರಣದ ವೇಳೆ ಪತ್ತೆಯಾದ ದೇಗುಲ ಶೈಲಿಯ ವಿಚಾರದಲ್ಲಿ ನಡೆದ ತಾಂಬೂಲ ಪ್ರಶ್ನೆಯಲ್ಲಿ ದೈವೀಶಕ್ತಿ ಇತ್ತು ಎಂದು ಗೋಚರವಾಗಿದೆ. ಈ ಪ್ರದೇಶದ ಬಗ್ಗೆ ಸರ್ವೆ ನಡೆದರೆ ಸತ್ಯಾಸತ್ಯತೆ ಹೊರಬರಲಿದೆ. ಐತಿಹಾಸಿಕ ಪುಸ್ತಕಗಳಲ್ಲೂ ಇಲ್ಲಿ ಸಾಕಷ್ಟು ದೈವ - ದೇವರುಗಳ ಸಾನ್ನಿಧ್ಯ ಇತ್ತು ಎಂಬುದು ಇದೆ. ಆದರೆ ಅವುಗಳು ಗೋಚರವಾಗುತ್ತಿಲ್ಲ. ಇದು ಸತ್ಯಾಸತ್ಯತೆ ತಿಳಿಯುವ ಪ್ರಯತ್ನವಾಗಿದ್ದು, ಯಾರ ವಿರುದ್ಧದ ಹೋರಾಟವಲ್ಲ ಎಂದು ಹೇಳಿದರು.
ಈ ವಿಚಾರದಲ್ಲಿ ರಾಜಕೀಯ ಬಣ್ಣ ಬಳಿಯುವುದು ಬೇಡ. ಎರಡು ತಿಂಗಳ ಹಿಂದೆ ಈ ವಿಚಾರ ಬೆಳಕಿಗೆ ಬಂದಿದ್ದು, ಆಗ ಯಾವುದೇ ರೀತಿಯ ತೊಂದರೆ ಇರಲಿಲ್ಲ. ಇದೀಗ ಈ ವಿಚಾರದಲ್ಲಿ ರಾಜಕೀಯ ಹೇಳಿಕೆಗಳನ್ನು ನೀಡಿರುವುದರಿಂದ ಒಂದು ರೀತಿಯ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಚುನಾವಣೆಗಾಗಿ ಈ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಹೇಳುತ್ತಿರುವುದು ಸರಿಯಲ್ಲ. ಮಸೀದಿಯ ನವೀಕರಣ ಮಾಡುವಾಗ ದೇವಾಲಯದ ಶೈಲಿಯ ಕಟ್ಟಡ ಕಂಡು ಬಂದ ಸಂದರ್ಭದಲ್ಲಿ ಇಂತಹ ಪ್ರಶ್ನೆಗಳು ಬಂದೇ ಬರುತ್ತದೆ ಎಂದರು.
ಮಳಲಿಯಲ್ಲಿ ಮುಸ್ಲಿಮರು ಮತ್ತು ಹಿಂದೂಗಳ ನಡುವೆ ಯಾವುದೇ ಸಮಸ್ಯೆಗಳು ಇಲ್ಲ. ಈ ಗೊಂದಲದ ಬಗ್ಗೆ ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಮಳಲಿ ಮಸೀದಿಯಲ್ಲಿ ಗುರುಮಠ, ಶಿವ, ದೇವಿ ಸಾನಿಧ್ಯ ಗೋಚರ; ಅಷ್ಟಮಂಗಲ ನಡೆಸಲು ಸೂಚನೆ