ಬಂಟ್ವಾಳ : ತಾಲೂಕಿನ ಪುಂಜಾಲಕಟ್ಟೆಯಿಂದ ಬಂಟ್ವಾಳದವರೆಗೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗೆ ಭೂಸ್ವಾಧೀನ ಮಾಡಿದರೂ ಪರಿಹಾರ ಇನ್ನೂ ಬಂದಿಲ್ಲ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ನಾವೂರು ಹಳೇಗೇಟು ಎಂಬಲ್ಲಿ ಹೆದ್ದಾರಿ ಮಧ್ಯೆ ಬೇಲಿ ಹಾಕಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಪರಿಹಾರ ನೀಡಲು ಒಂದು ತಿಂಗಳು ಗಡುವು ನೀಡಿರುವ ಪ್ರತಿಭಟನಾಕಾರರು, ಅಷ್ಟರೊಳಗೆ ಬೇಡಿಕೆ ಈಡೇರದೇ ಇದ್ದರೆ, ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಮಂಗಳವಾರ ಸ್ಥಳೀಯ ಸದಾನಂದ ನಾವೂರು ಅವರು ಹೆದ್ದಾರಿಗಾಗಿ ನೀಡಿದ ಜಾಗಕ್ಕೆ ಬೇಲಿ ಹಾಕಿ ಪ್ರತಿಭಟನೆ ಆರಂಭಿಸಿದ್ದರು. ಪರಿಹಾರ ಮೊತ್ತದ ಪತ್ರ ಮಾತ್ರ ಬಂದಿದ್ದು, ಪರಿಹಾರ ಇನ್ನೂ ಕೈಸೇರಿಲ್ಲ ಎಂದು ದೂರಿದರು.
ಈ ಕುರಿತು ಸ್ಥಳೀಯ ಸಂತ್ರಸ್ತರು ಮಾಧ್ಯಮಗಳೊಂದಿಗೆ ಮಾತನಾಡಿ, ಪರಿಹಾರವನ್ನು ನಂಬಿ ಮನೆಯನ್ನೂ ಕೆಡವಿದ್ದೇವೆ. ಆದರೆ, ಇನ್ನೂ ಯಾವುದೇ ಪರಿಹಾರ ದೊರಕಿಲ್ಲ. ಹಲವರು ಬಡ ಕುಟುಂಬಗಳಿಗೆ ಸೇರಿದ್ದು, ದಿನನಿತ್ಯದ ದುಡಿಮೆ ನಂಬಿ ಬದುಕುವವರಿದ್ದಾರೆ ಎಂದರು.