ಮಂಗಳೂರು: ಕರಾವಳಿಯ ಪ್ರತಿಷ್ಠಿತ ಬ್ಯಾಂಕ್ಗಳಾದ ಕಾರ್ಪೊರೇಷನ್ ಹಾಗೂ ಸಿಂಡಿಕೇಟ್ ಬ್ಯಾಂಕ್ಗಳನ್ನು ವಿಲೀನಗೊಳಿಸಲು ಪ್ರಧಾನಿ ಮೋದಿ ನೇತೃತ್ವದ ಕ್ಯಾಬಿನೆಟ್ ಸಭೆ ಅಂತಿಮ ನಿರ್ಧಾರಕ್ಕೆ ಸಹಿ ಹಾಕಿರುವುದನ್ನು ಖಂಡಿಸಿ ಬ್ಯಾಂಕ್ ಅಧಿಕಾರಿಗಳು ಹಾಗೂ ಸಮಾನ ಮನಸ್ಕರ ತಂಡ ಇಂದು ನಗರದ ಪುರಭವನದ ಎದುರು ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿದರು.
ಬ್ಯಾಂಕ್ ವಿಲೀನೀಕರಣದಿಂದ ಕರಾವಳಿಯ ಆರ್ಥಿಕತೆಗೆ ಹಿನ್ನಡೆಯಾದರೆ, ಬ್ಯಾಂಕ್ನ ಅಭಿವೃದ್ಧಿ, ಹಣಕಾಸಿನ ವಿಚಾರಕ್ಕೂ ತೊಂದರೆ ಆಗುತ್ತದೆ. ಆದರೆ, ಬ್ಯಾಂಕ್ ವಿಲೀನವನ್ನು ವಿರೋಧಿಸಿ ಹಲವಾರು ಮನವಿ, ಹೋರಾಟಗಳನ್ನು ಮಾಡಿದರೂ ಯಾವುದೇ ಫಲ ಸಿಗಲಿಲ್ಲ. ಸರ್ಕಾರವು ನಮ್ಮ ಯಾವುದೇ ಹೋರಾಟ ಮನವಿಗಳಿಗೆ ಸ್ಪಂದನೆ ನೀಡದೆ, ವಿಲೀನ ಪ್ರಕ್ರಿಯೆಯನ್ನು ಏಪ್ರಿಲ್ 1ರಿಂದ ಜಾರಿಗೆ ತರುವಂತೆ ಆದೇಶ ಹೊರಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿಕರು, ಜನಸಾಮಾನ್ಯರು ಹಾಗೂ ಸಣ್ಣ ಮಟ್ಟದ ವ್ಯಾಪಾರಿಗಳಿಗೆ ಸಹಾಯ ಮಾಡುವುದು ಕಾರ್ಪೊರೇಷನ್ ಹಾಗೂ ಸಿಂಡಿಕೇಟ್ ಬ್ಯಾಂಕ್ಗಳ ಮೂಲ ಉದ್ದೇಶ. ಆದರೆ, ಕ್ಯಾಬಿನೆಟ್ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಇನ್ನು ಮುಂದೆ ಬ್ಯಾಂಕ್ಗಳು ದೊಡ್ಡ ಮೊತ್ತದ ಸಾಲಗಳನ್ನು ನೀಡಬಹುದು. ಇದರಿಂದ ಬ್ಯಾಂಕ್ಗಳನ್ನು ಜನಸಾಮಾನ್ಯರಿಂದ ದೂರ ಕೊಂಡೊಯ್ಯಲಿದೆ ಎಂದು ದಿನೇಶ್ ಹೆಗ್ಡೆ ಉಳೇಪಾಡಿ ಹೇಳಿದರು.