ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಎಕಾನಾಮಿಕ್ ಮತ್ತು ನಾರ್ಕೋಟಿಕ್ ಠಾಣೆಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರಿನ ಸುರತ್ಕಲ್ ಬಳಿಯ ಚೊಕ್ಕಬೆಟ್ಟು ನಿವಾಸಿ ಮೊಹಮ್ಮದ್ ಶರೀಫ್ ಸಿದ್ದಿಕ್(40), ಕಾಟಿಪಳ್ಳ ನಿವಾಸಿ ಮೊಹಮ್ಮದ್ ಶಾಫಿ ಅಲಿಯಾಸ್ ಚಪ್ಪಿ(33), ಕೈಕಂಬ ನಿವಾಸಿ ಮೊಹಮ್ಮದ್ ಅನಾಸ್(27) ಬಂಧಿತ ಆರೋಪಿಗಳು. ಮುಂಬೈನಿಂದ ಅಕ್ರಮವಾಗಿ ಮಂಗಳೂರಿಗೆ ಐಷಾರಾಮಿ ಕಾರೊಂದರಲ್ಲಿ ಮಾದಕ ವಸ್ತುಗಳನ್ನು ತರುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮುಲ್ಕಿ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 87,560 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, 3 ಮೊಬೈಲ್ ಫೋನ್ ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಅಂದಾಜು 51,12,560 ಲಕ್ಷ ರೂ. ಮೌಲ್ಯದ ಐಷಾರಾಮಿ ಬಿಎಂಡಬ್ಲ್ಯೂ ಕಾರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಪೈಕಿ ಮೊಹಮ್ಮದ್ ಶರೀಫ್ ಸಿದ್ದೀಕ್ ವಿರುದ್ಧ ಈ ಹಿಂದೆಯೂ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಹೊಂದಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪಿ ಮೊಹಮ್ಮದ್ ಶಾಫಿ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಹೊಂದಿದ್ದ ಪ್ರಕರಣ ದಾಖಲಾಗಿತ್ತು. ಆರೋಪಿ ಮೊಹಮ್ಮದ್ ಅನಾಸ್ ವಿರುದ್ಧ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣವೊಂದು ದಾಖಲಾಗಿದೆ.