ಮಂಗಳೂರು: ಹೆದ್ದಾರಿಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡಲು ಯತ್ನಿಸುತ್ತಿದ್ದ ಐವರನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ಗೋಳ್ತಮಜಲು ನಿವಾಸಿ ಉಮ್ಮರ್ ಫಾರೂಕ್ (26), ಮುಹಮ್ಮದ್ ರಮೀಜ್ (22), ಮಂಗಿಳಪದವು ನಿವಾಸಿ ಮುಹಮ್ಮದ್ ಅಬೂಬಕ್ಕರ್ (21), ಮಂಚಿ ನಿವಾಸಿ ಅಬ್ದುಲ್ ಖಾದರ್(40), ಬಾಳ್ತಿಲ ನಿವಾಸಿ ಇಬ್ರಾಹಿಂ ಖಲೀಲ್ (24) ಬಂಧಿತರು.
ಈ ಐವರು ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಮಂಚಿಕಟ್ಟೆ ಎಂಬಲ್ಲಿ ಅನುಮಾನಾಸ್ಪಾದವಾಗಿ ನಿಂತಿದ್ದ ವೇಳೆ, ಪೊಲೀಸರು ವಿಚಾರಣೆ ನಡೆಸಿದ್ದು, ಆಗ ಹೆದ್ದಾರಿಯಲ್ಲಿ ದರೋಡೆಗೆ ಯೋಜಿಸಿರುವುದು ತಿಳಿದುಬಂದಿದೆ. ಇನ್ನು ಐವರು ಆರೋಪಿಗಳನ್ನು ಬಂಧಿಸಿದ್ದು, ಇನ್ನೋರ್ವ ಸುರಿಬೈಲ್ನ ಅಕ್ಬರ್ ಎಂಬಾತ ಪರಾರಿಯಾಗಿದ್ದಾನೆ.
ಆರೋಪಿಗಳಿಂದ ಮಾರಾಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲ, ಆರೋಪಿಗಳ ಬಳಿ 2 ಗ್ರಾಂ. ಗಾಂಜಾ ಕೂಡ ಸಿಕ್ಕಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.