ಮಂಗಳೂರು: ಚಿನ್ನ ಕಳ್ಳತನ ಆರೋಪದಲ್ಲಿ 13 ವರ್ಷದ ಬಾಲಕಿಗೆ ವಿಚಾರಣೆ ನಡೆಸುವ ನೆಪದಲ್ಲಿ ದೌರ್ಜನ್ಯವೆಸಗಿದ ಮೂವರು ಪೊಲೀಸರನ್ನು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಅಮಾನತುಗೊಳಿಸಿದ್ದಾರೆ.
ಕೌಡಿಚಾರ್ ನಿವಾಸಿ 13 ವರ್ಷದ ಬಾಲಕಿ ಚಿನ್ನ ಕಳವು ಮಾಡಿದ್ದಾರೆ ಎಂಬ ಆರೋಪದಡಿ ವಿಚಾರಣೆ ನಡೆಸಿದ ಪೊಲೀಸರ ಮೇಲೆ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿತ್ತು. ದೌರ್ಜನ್ಯಕ್ಕೊಳಗಾದ ಬಾಲಕಿಯನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಆರೋಪ ಕೇಳಿ ಬಂದ ಬೆನ್ನಿಗೆ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಅವರು ಪುತ್ತೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಪೊಲೀಸರು ದೌರ್ಜನ್ಯ ಎಸಗಿರುವುದು ತಿಳಿದು ಬಂದಿದೆ.
ಬಾಲಕಿ ತಂದೆ-ತಾಯಿ ಜೊತೆಗೆ ದುರ್ವರ್ತನೆ ತೋರಿದ ಪೊಲೀಸ್ ಸಿಬ್ಬಂದಿ ದಿನೇಶ್ ಹಾಗೂ ಬಾಲಕಿಗೆ ದೌರ್ಜನ್ಯ ಎಸಗಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಪ್ರಶ್ನಿತ ಮತ್ತು ಗಾಯತ್ರಿ ಎಂಬುವರನ್ನು ಅಮಾನತುಗೊಳಿಸಲಾಗಿದೆ.