ಮಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಕಾಮುಕನಿಗೆ ಪೋಕ್ಸೊ ನ್ಯಾಯಾಲಯ ಐದು ವರ್ಷಗಳ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಅಸ್ಸೋಂ ಮೂಲದ ಯುವಕನ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಗಳೂರಿನ ಪೋಕ್ಸೊ ವಿಶೇಷ ನ್ಯಾಯಾಲಯ ಕಾಮುಕನಿಗೆ ಐದು ವರ್ಷಗಳ ಸಜೆ ವಿಧಿಸಿ ತೀರ್ಪು ನೀಡಿದೆ. ಅಸ್ಸೋಂನ ಹಜಾರಿಗ್ರಾಮ ಮೂಲದ ಅತೀಕ್ ಉರ್ ರಹ್ಮಾನ್ ಲಷ್ಕರ್(28) ಶಿಕ್ಷೆಗೊಳಗಾಗಿರುವ ಅಪರಾಧಿ.
ಮಂಗಳೂರಿನ ಬೈಕಂಪಾಡಿ ಸಮೀಪದ ಅಂಗರಗುಂಡಿಯ ಬಳಿ ಅತೀಕ್ ಬಾಡಿಗೆಗೆ ಇದ್ದ. ಆಗ ಪಕ್ಕದ ಮನೆಯ ಆರು ವರ್ಷದ ಬಾಲಕಿಯನ್ನು 2018ರ ಜೂನ್ 24ರಂದು ಸಂಜೆ ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದ. ಬಾಲಕಿ ಈ ಬಗ್ಗೆ ತನ್ನ ತಂದೆಗೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಬಾಲಕಿಯ ತಂದೆ ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದನ್ನಾಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು.
ಈ ಸಂದರ್ಭ ಇನ್‌ಸ್ಪೆಕ್ಟರ್ ಉಮೇಶ್ ಕುಮಾರ್ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಬಳಿಕ ಪ್ರಕರಣವನ್ನು ಮಂಗಳೂರಿನ ಪೋಕ್ಸೊ ವಿಶೇಷ ನ್ಯಾಯಾಲಯ ಕೈಗೆತ್ತಿಕೊಂಡಿತ್ತು. ಈ ಬಗ್ಗೆ ಒಟ್ಟು 25 ಸಾಕ್ಷಿಗಳನ್ನು ವಿಚಾರಿಸಲಾಗಿದ್ದು, ಇದರಲ್ಲಿ 20 ಮಂದಿ ಸಾಕ್ಷಿ ನುಡಿದಿದ್ದರು.
ಪೋಕ್ಸೊ ವಿಶೇಷ ನ್ಯಾಯಾಧೀಶೆ ಪಲ್ಲವಿ ಬಿ.ಆರ್. ಅವರು ವಿಚಾರಣೆ ನಡೆಸಿ, ಆರೋಪಿಯನ್ನು ದೋಷಿ ಎಂದು ಪರಿಗಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಪರಾಧಿ ಅತೀಕ್ ಗೆ ಐದು ವರ್ಷ ಸಾದಾ ಸಜೆ, 5,000 ರೂ. ದಂಡ ವಿಧಿಸಲಾಗಿದೆ. ಇದರಲ್ಲಿ 3,000 ರೂ. ಮೊತ್ತವನ್ನು ಸಂತ್ರಸ್ತ ಬಾಲಕಿಗೆ ನೀಡಲು ಸೂಚಿಸಲಾಗಿದೆ. ಅಲ್ಲದೆ ಜಿಲ್ಲಾ ಕಾನೂನು ನೆರವು ಪ್ರಾಧಿಕಾರದವರು ಬಾಲಕಿಗೆ ಸೂಕ್ತ ಪರಿಹಾರ ನೀಡಬೇಕೆಂದು ನ್ಯಾಯಾಧೀಶರು ಆದೇಶಿಸಿದ್ದಾರೆ.
ಸಂತ್ರಸ್ತೆ ಪರ ಸರ್ಕಾರಿ ವಿಶೇಷ ಅಭಿಯೋಜಕ ಸಿ.ವೆಂಕಟರಮಣ ಸ್ವಾಮಿ ವಾದಿಸಿದ್ದರು.