ಮಂಗಳೂರು: ಮುಸ್ಲಿಂ ಸಮುದಾಯವನ್ನು ಅವಮಾನಗೊಳಿಸುವಂತಹ ಹೇಳಿಕೆ ನೀಡಿರುವ ಕೆ. ಎಸ್. ಈಶ್ವರಪ್ಪನವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ತಕ್ಷಣ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ದ.ಕ ಜಿ.ಪಂ ಸ್ಥಾಯೀ ಸಮಿತಿಯ ಸದಸ್ಯ ಶಾಹುಲ್ ಹಮೀದ್ ಹೇಳಿದ್ದಾರೆ.
ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪನವರು ಬಿಜೆಪಿಗೆ ಮತ ಚಲಾಯಿಸಿದವರು ದೇಶಭಕ್ತರು, ಮತ ಚಲಾಯಿಸದವರು ದೇಶ ದ್ರೋಹಿಗಳು ಎಂದು ಹೇಳಿಕೆ ನೀಡಿದ್ದಕ್ಕೆ ಶಾಹುಲ್ ಹಮೀದ್ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಹೇಳಿಕೆಗಳ ಮೂಲಕ ಅವರೊಬ್ಬ ಕೊಳಕು ಬಾಯಿಯ ರಾಜಕಾರಣಿ ಅನ್ನೋದನ್ನು ಸಾಬೀತು ಪಡಿಸಿದ್ದಾರೆ ಎಂದು ಶಾಹುಲ್ ಹಮೀದ್ ಜರಿದಿದ್ದಾರೆ.
ವೇದಿಕೆಯಲ್ಲಿದ್ದ ರೌಡಿಶೀಟರ್ಗಳು, ಕೊಲೆ ಸುಲಿಗೆ ಮಾಡಿದವರನ್ನು ದೇಶಭಕ್ತರು ಎಂದು ಈಶ್ವರಪ್ಪ ಬಿಂಬಿಸುತ್ತಿದ್ದಾರೆ. ಬಿಜೆಪಿಗೆ ಮತ ಹಾಕದವರು ದೇಶದ್ರೋಹಿಗಳು ಎಂದಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಗೆ ಜನತೆ ಮತ ಹಾಕಿದ್ದು ಶೇ. 36%. ಉಳಿದ 64% ರಷ್ಟು ಜನ ಬಿಜೆಪಿಗೆ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಹಾಗಾದರೆ ಈ 64% ಜನತೆ ದೇಶದ್ರೋಹಿಗಳಾ ಎಂದು ಶಾಹುಲ್ ಹಮೀದ್ ಪ್ರಶ್ನಿಸಿದ್ದಾರೆ.
ಈಶ್ವರಪ್ಪನವರು ನೋಟು ಎಣಿಸುವ ಯಂತ್ರ ಮಾತ್ರವಲ್ಲ. ಮಾಡಿರುವ ಪಾಪಕೃತ್ಯವನ್ನು ಎಣಿಸುವಂತಹ ಯಂತ್ರವನ್ನು ಅವರು ಖರೀದಿಸಬೇಕು. ಅವರು ಮುಸ್ಲಿಮರಿಗೆ ನಿಂದಿಸಿದ ಕೂಡಲೇ ಪ್ರಮೋಷನ್ ದೊರಕುತ್ತದೆ ಎಂದು ತಿಳಿದುಕೊಂಡಿರಬೇಕು ಎಂದು ಶಾಹುಲ್ ವಾಗ್ದಾಳಿ ನಡೆಸಿದರು.