ಮಂಗಳೂರು: ಹದಿನಾರರ ಹರೆಯದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಆಕೆ ಶಿಶುವಿಗೆ ಜನ್ಮ ನೀಡಲು ಕಾರಣನಾದ ವ್ಯಕ್ತಿಗೆ ಮಂಗಳೂರಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹಾಗೂ 2ನೇ ತ್ವರಿತಗತಿ ವಿಶೇಷ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಸುರತ್ಕಲ್ ಬಳಿಯ ಸಸಿಹಿತ್ಲು ನಿವಾಸಿ ವಾಮನ ಪೂಜಾರಿ (59) ಶಿಕ್ಷೆಗೊಳಗಾದ ಅಪರಾಧಿ.
2016ರ ಸೆಪ್ಟಂಬರ್ ತಿಂಗಳಲ್ಲಿ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ವಾಮನ ಪೂಜಾರಿ ಅತ್ಯಾಚಾರ ಎಸಗಿದ್ದ. ಯಾರಿಗೂ ವಿಚಾರ ತಿಳಿಸಿದಂತೆ ಬೆದರಿಕೆಯನ್ನೂ ಹಾಕಿದ್ದಾನೆ. ಆ ಬಳಿಕ ಆಕೆಯ ಮೇಲೆ ನಿರಂತರವಾಗಿ ದುಷ್ಕೃತ್ಯ ಎಸಗುತ್ತಾ ಬಂದಿದ್ದಾನೆ. ಪರಿಣಾಮ, ಬಾಲಕಿ ಗರ್ಭಿಣಿಯಾಗಿದ್ದು, 2017 ಮಾ. 29 ರಂದು ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ರಷ್ಯಾ-ಉಕ್ರೇನ್ ವಿಚಾರವಾಗಿ ಭಾರತ ಏನು ಮಾಡಬೇಕೆಂದು ಹೇಳುವುದಿಲ್ಲ: ಬ್ರಿಟನ್
ಡಿಎನ್‌ಎ ಪರೀಕ್ಷೆಯಲ್ಲಿ ವಾಮನ ಪೂಜಾರಿಯೇ ಹೆಣ್ಣು ಮಗುವಿನ ಜೈವಿಕ ತಂದೆ ಎನ್ನುವುದು ಸಾಬೀತಾಗಿತ್ತು. ಈ ಬಗ್ಗೆ ಸುರತ್ಕಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಚ್.ಎಂ.ಪೂವಪ್ಪ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಇನ್ಸ್‌ಪೆಕ್ಟರ್ ಚೆಲುವರಾಜು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಮಂಗಳೂರಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹಾಗೂ 2ನೇ ತ್ವರಿತಗತಿ ವಿಶೇಷ ನ್ಯಾಯಾಲಯ ಆರೋಪಿ ಮೇಲಿದ್ದ ಆರೋಪ ಸಾಬೀತಾಗಿದೆ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಪೊಕ್ಸೊ ಕಾಲಂ 6 ರನ್ವಯ 10 ವರ್ಷ ಕಠಿಣ ಶಿಕ್ಷೆ ಮತ್ತು 30 ಸಾವಿರ ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಹೆಚ್ಚುವರಿಯಾಗಿ 2 ತಿಂಗಳ ಸದಾ ಸಜೆ ಅನುಭವಿಸಬೇಕು. ಐಪಿಸಿ ಸೆಕ್ಷನ್ 506 (ಕೊಲೆ ಬೆದರಿಕೆ ಆರೋಪ) ಅನ್ವಯ 1 ವರ್ಷ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.
ಇದನ್ನೂ ಓದಿ: 19 ಕೆಜಿ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ₹250 ಏರಿಕೆ
ಅಲ್ಲದೇ, ಸಂತ್ರಸ್ತ ಬಾಲಕಿಗೆ 4 ಲಕ್ಷ ರೂ. ಗಳನ್ನು ಸರಕಾರದಿಂದ ಪರಿಹಾರವಾಗಿ ಕೊಡಿಸಬೇಕೆಂದು ಆದೇಶಿಸಲಾಗಿದೆ. ಸರಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ವೆಂಕಟರಮಣ ಸ್ವಾಮಿ ವಾದ ಮಂಡಿಸಿದ್ದರು.