ಮಂಗಳೂರು: ನಮ್ಮ ಸುತ್ತಲೂ ಸಾಕಷ್ಟು ಶ್ವಾನಪ್ರಿಯರು ಕಣ್ಣಿಗೆ ಬೀಳುತ್ತಲೇ ಇರುತ್ತಾರೆ. ವಿವಿಧ ತಳಿಗಳ ಶ್ವಾನಗಳನ್ನು ವಿಹಾರಕ್ಕೆ ಕೊಂಡೊಯ್ಯುವರನ್ನೋ, ಕಾರುಗಳಲ್ಲಿ ಕರೆದೊಯ್ಯುವವರನ್ನು ನಾವು ಕಾಣುತ್ತಿರುತ್ತೇವೆ. ಆದರೆ, ಮಂಗಳೂರಿನ ಈ ಶ್ವಾನಪ್ರಿಯೆ ಹಿಂದೆಂದೂ ನೋಡಿರಲು ಸಾಧ್ಯವಿಲ್ಲ. ಈಕೆಯ ಶ್ವಾನಪ್ರೀತಿಗೆ, ಪ್ರಾಣಿ ಪ್ರೀತಿಗೆ ಯಾರೂ ಸರಿಸಾಟಿ ಇಲ್ಲ.
ನಗರದ ಬಳ್ಳಾಲ್ ಬಾಗ್ ನಿವಾಸಿ ರಜನಿ ಶೆಟ್ಟಿ ತನ್ನ ಮೂವರು ಮಕ್ಕಳು, ಪತಿಯೊಂದಿಗೆ ಬಾಡಿಗೆ ಮನೆಯಲ್ಲಿದ್ದರೂ 60 ವಿಶೇಷ ಅತಿಥಿಗಳು ಇವರಲ್ಲಿ ಆಶ್ರಯ ಪಡೆದಿದ್ದಾರೆ. ನಾಯಿ, ಬೆಕ್ಕು, ಗಿಡುಗ ಹಾಗೂ ಮೊಲಗಳನ್ನು ಇವರು ಸಾಕಿದ್ದು, ಇದರಲ್ಲಿ ಶೇ.30 ರಷ್ಟು ನಾಯಿಗಳು, ಉಳಿದಂತೆ ಬೆಕ್ಕುಗಳು, ಗಿಡುಗ ಹಾಗೂ ಮೊಲಗಳು ಇವೆ.
ಇಲ್ಲಿರುವ ಎಲ್ಲಾ ಪ್ರಾಣಿ, ಪಕ್ಷಿಗಳು ವಿವಿಧ ಅವಘಡಗಳಿಗೆ ಸಿಲುಕಿ ಬಲಹೀನವಾಗಿವೆ. ಇವುಗಳನ್ನು ರಕ್ಷಿಸಿ ತಮ್ಮ ಮನೆಗೆ ತಂದು ಇವರು ಪ್ರೀತಿಯಿಂದ ಸಾಕುತ್ತಿದ್ದಾರೆ. ಇದರಲ್ಲಿ 3-4 ನಾಯಿಗಳಿಗೆ ಸೊಂಟವೇ ಇಲ್ಲ. ತೆವಳಿಕೊಂಡು ಹೋಗುತ್ತಿವೆ. ಎರಡು ನಾಯಿಗಳು ತೀರಾ ಅನಾರೋಗ್ಯಕ್ಕೆ ಒಳಗಾಗಿ ಡ್ರಿಪ್ಸ್‌ನಲ್ಲಿ ಇವೆ. ಉಳಿದಂತೆ ಎಲ್ಲಾ ನಾಯಿಗಳು ಅನಾರೋಗ್ಯಕ್ಕೆ ಒಳಗಾಗಿ ಇವರಿಂದ ಆರೈಕೆ ಪಡೆಯುತ್ತಿವೆ.
ಎಲ್ಲಾದರೂ ಪ್ರಾಣಿಗಳು, ಶ್ವಾನಗಳು ತೊಂದರೆಗೆ ಸಿಲುಕಿಕೊಂಡರೂ ರಜನಿ ಶೆಟ್ಟಿ ಕೂಡಲೇ ಸ್ಥಳಕ್ಕೆ ಬಂದು ಅವುಗಳನ್ನು ರಕ್ಷಿಸುತ್ತಾರೆ. ಮಂಗಳೂರಿನ ಸುತ್ತಮುತ್ತಲಿನ ತೆರೆದ ಬಾವಿಗಳಿಗೆ ನಾಯಿ, ಬೆಕ್ಕುಗಳು ಬಿದ್ದರೂ ಇವರಿಗೆ ಕರೆ ಬರುತ್ತದೆ. ಆ ಪ್ರಾಣಿಗಳನ್ನು ರಕ್ಷಿಸಲು ತಮ್ಮ ಜೀವದ ಹಂಗು ತೊರೆದು ಈಕೆ ಬಾವಿಗಿಳಿದ ಎಷ್ಟೋ ಉದಾಹರಣೆಗಳಿವೆ.
ಪ್ರಾಣಿಗಳ ಮೇಲೆ ಪ್ರೀತಿ ಹೆಚ್ಚಿಸಿತ್ತು ಆ ವೊಂದು ಘಟನೆ
15 ವರ್ಷಗಳ ಹಿಂದೆ ರಜನಿ ಶೆಟ್ಟಿ ಒಮ್ಮೆ ಮಂಗಳೂರಿನಿಂದ ಉಡುಪಿಗೆ ಸಂಚರಿಸುತ್ತಿದ್ದ ವೇಳೆ ದಾರಿ ಮಧ್ಯೆ ಹಸಿದ ನಾಯಿಯೊಂದು ಆಮ್ಲೇಟ್ ತಿಂದು ಬಿಸಾಡಿರುವ ಪೇಪರ್ ಚೂರನ್ನೇ ತಿನ್ನಲು ಹವಣಿಸಿತ್ತಂತೆ. ಇದನ್ನು ಗಮನಿಸಿದ ಇವರು ಅದೇ ಅಂಗಡಿಯಲ್ಲಿ ಆಮ್ಲೇಟ್ ಕೊಂಡು ನಾಯಿಗೆ ಹಾಕಿದ್ದಾರೆ. ಆಗ ನಾಯಿಯ ಮುಖದಲ್ಲಿನ ಸಂತೋಷ ಕಂಡಿದ್ದಾರೆ. ಅಂದಿನಿಂದ ಬೀದಿ ಬದಿ ಶ್ವಾನಗಳಿಗೆ ಆಹಾರ ನೀಡುವುದು, ಬೀದಿ ಬದಿಯಲ್ಲಿ ತೊಂದರೆಗೊಳಗಾಗಿರುವ ಪ್ರಾಣಿಗಳಿಗೆ ರಕ್ಷಣೆ ನೀಡಲು ಆರಂಭಿಸಿದ್ದರಂತೆ.
ಸಮಸ್ಯೆಗೆ ಒಳಗಾದ ಪ್ರಾಣಿಗಳ ಆರೈಕೆ ಮಾತ್ರವಲ್ಲದೇ, ದಿನವೊಂದಕ್ಕೆ ಬೀದಿ ಬದಿಯ 800ಕ್ಕೂ ಅಧಿಕ ನಾಯಿಗಳಿಗೆ ಅನ್ನ, ಕೋಳಿ ಪದಾರ್ಥಗಳು ಸೇರಿ 200 ಕೆ.ಜಿ.ಆಹಾರ ನೀಡಿ ಹೊಟ್ಟೆ ತಣಿಸುತ್ತಾರೆ. ಸಂಜೆಯಾಗುತ್ತಲೇ ಮಕ್ಕಳ ಸಹಾಯವೋ, ಪತಿಯ ಸಹಾಯವನ್ನು ಪಡೆದು ವಿವಿಧೆಡೆಗಳಿಗೆ ಹೋಗಿ ನಾಯಿಗಳಿಗೆ ಆಹಾರ ಕೊಡ್ತಾರೆ. ದಿನವೊಂದಕ್ಕೆ ಇಷ್ಟೊಂದು ಪ್ರಮಾಣದ ಆಹಾರ ಒದಗಿಸಲು ದಾನಿಗಳು ಸಹಕರಿಸುತ್ತಲೇ ಇರುತ್ತಾರೆ ಎಂದು ರಜನಿ ಶೆಟ್ಟಿಯವರು ಹೇಳುತ್ತಾರೆ.
ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ..
ನಾಯಿ, ಬೆಕ್ಕು ಸೇರಿದಂತೆ ವಿವಿಧ ಪ್ರಾಣಿ, ಪಕ್ಷಿಗಳು ಅನಾರೋಗ್ಯದಿಂದಿರುವಾಗ, ಸ್ಟೆರಿಲೈಝ್ ಮಾಡಲು ಎನಿಮಲ್ ಕೇರ್ ಟ್ರಸ್ಟ್, ಡಾ.ಯಶಸ್ವಿನಿ ಇವರಿಗೆ ಸಹಕಾರ ನೀಡುತ್ತಾರಂತೆ. ಒಟ್ಟಿನಲ್ಲಿ ಇವರ ಈ ಕಾರ್ಯಕ್ಕೆ ಸಾಕಷ್ಟು ದಾನಿಗಳು ಸಹಕರಿಸುತ್ತಲೇ ಇರುತ್ತಾರಂತೆ. ಇತ್ತೀಚಿಗೆ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಇವರ ಸಾಹಸಗಾಥೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದು, ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಜನಿ ಶೆಟ್ಟಿ ಅವರ ಕಾರ್ಯಕ್ಕೆ ದೇಶದ ನಾನಾ ಭಾಗಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಭಲೇ ಧೀರೆ.. 45 ಅಡಿ ಆಳದ ಬಾವಿಗಿಳಿದು ನಾಯಿ ರಕ್ಷಿಸಿದ ಮಂಗಳೂರಿನ ಶ್ವಾನಪ್ರಿಯೆ!