ಉಪ್ಪಿನಂಗಡಿ(ದಕ್ಷಿಣ ಕನ್ನಡ): ಕರ್ತವ್ಯ ನಿರತ ಉಪ್ಪಿನಂಗಡಿ ಮೆಸ್ಕಾಂ ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬರು ದೊಣ್ಣೆಯಿಂದ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ಗಾಯಗೊಂಡಿರುವ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಉಪ್ಪಿನಂಗಡಿ ಮೆಸ್ಕಾಂ ಕಚೇರಿಯ ಸಿಬ್ಬಂದಿ ಜೂನಿಯರ್ ಲೈನ್ ಮ್ಯಾನ್ ವಿತೇಶ್ ಮತ್ತು ಸತೀಶ್ ಹಿರೆಬಂಡಾಡಿ ಹಲ್ಲೆಗೊಳಗಾದವರು. ಹಲ್ಲೆಗೊಳಗಾಗಿ ಗಾಯಗೊಂಡಿರುವ ಇವರಿಬ್ಬರು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೊಣ್ಣೆಯಿಂದ ಹಲ್ಲೆ ನಡೆಸಿದಾತ ಉಪ್ಪಿನಂಗಡಿ ನಿವಾಸಿ ಇಸುಬು ಎಂದು ಗುರುತಿಸಲಾಗಿದೆ.
ಇಸುಬು ಬಳಿ ಸುಮಾರು 50 ಆಡುಗಳಿದ್ದು, ಅದನ್ನು ಅವರು ನಿತ್ಯ ಉಪ್ಪಿನಂಗಡಿ ಪೇಟೆ ಹಾಗೂ ಇತರೆಡೆ ಮೇಯಿಸುತ್ತಾರೆ. ಇದರಿಂದ ವಾಹನ ಸಂಚಾರಕ್ಕೆ ತೊಡಕುಂಟಾಗಿ, ಸಣ್ಣಪುಟ್ಟ ಅಪಘಾತ ನಡೆದು ಇದರ ವಾಗ್ವಾದ ಹಲ್ಲೆಯಲ್ಲಿ ಮುಕ್ತಾಯಗೊಂಡಿದೆ ಎನ್ನಲಾಗ್ತಿದೆ.
ಶುಕ್ರವಾರ ಸಂಜೆ ಸುಮಾರು 30-40 ಆಡುಗಳು ಉಪ್ಪಿನಂಗಡಿ ಮೆಸ್ಕಾಂ ಕಚೇರಿಯೊಳಗಡೆ ಹೊಕ್ಕು ಅಲ್ಲಿದ್ದ ಹೂವಿನ ಗಿಡ ಹಾಗೂ ಇತರೆ ಗಿಡಗಳನ್ನು ತಿಂದಿವೆ ಎನ್ನಲಾಗಿದೆ. ಕಳೆದ ವಾರ ಕೂಡ ಇಸುಬುಗೆ ಸೇರಿದ ಆಡುಗಳು ಮೆಸ್ಕಾಂ ಕಚೇರಿ ಆವರಣಕ್ಕೆ ಬಂದ ಸಮಯದಲ್ಲಿ ಮತ್ತೆ ಆಡನ್ನು ಕಚೇರಿಯೊಳಗಡೆ ಬಿಡದಂತೆ ಅಲ್ಲಿನ ಸಿಬ್ಬಂದಿ ತಾಕೀತು ಮಾಡಿದ್ದರು. ಆದರೆ ಮತ್ತೆ ನಿನ್ನೆ ಆಡುಗಳು ಕಚೇರಿಯ ಒಳಗಡೆ ಬಂದಾಗ, ಅಲ್ಲಿದ್ದ ಸಿಬ್ಬಂದಿ ಆಡುಗಳನ್ನು ಓಡಿಸಿದ್ದಾರೆ. ಈ ಸಮಯದಲ್ಲಿ ಆಡುಗಳು ಚೆಲ್ಲಾಪಿಲ್ಲಿಯಾಗಿ ಓಡಿವೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಸಲಗ ಸಿನಿಮಾ ನೋಡಿದ ಬಳಿಕ ರಿಯಲ್ ಆಗಿ ಮಾರಾಮಾರಿ.. ಆರೋಪಿಗಳ ಬಂಧನ
ಇದರಿಂದ ಕೆರಳಿದ ಇಸುಬು ದೊಣ್ಣೆ ಹಿಡಿದು ಮೆಸ್ಕಾಂ ಕಚೇರಿ ಬಳಿ ಬಂದಿದ್ದಾರೆ. ಅದೇ ವೇಳೆ ಲೈನ್ ಮ್ಯಾನ್ ವಿತೇಶ್‌ರವರು ವಿದ್ಯುತ್ ಲೈನ್ ದುರಸ್ತಿ ಮಾಡಿ, ಬೈಕ್ ನಿಲ್ಲಿಸಿ ಕಚೇರಿ ಆವರಣದೊಳಗೆ ಪ್ರವೇಶ ಮಾಡುತ್ತಲೇ ದೊಣ್ಣೆ ಹಿಡಿದು ನಿಂತಿದ್ದ ಇಸುಬು ಅವರು ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಈ ಸಂದರ್ಭ ವಿತೇಶ್‌ರವರ ರಕ್ಷಣೆಗೆ ಬಂದ ಕಚೇರಿ ಸಿಬ್ಬಂದಿ ಸತೀಶ್ ಅವರ ಮೇಲೂ ಇಸುಬು ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.