ಮಂಗಳೂರು: ಇತ್ತೀಚೆಗೆ ನಗರದಲ್ಲಿ ನಾಯಿಯನ್ನು ಬೈಕ್ಗೆ ಕಟ್ಟಿ ಎಳೆದೊಯ್ದ ಎರಡು ಪ್ರಕರಣಗಳು, ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣವೊಂದು ನಡೆದಾಗ ಮಾನವೀಯತೆ ಸತ್ತಿದೆಯೇ? ಎಂಬ ಕಲ್ಪನೆ ಸುಳಿದಾಡಿತ್ತು. ಆದರೆ ಇಲ್ಲೊಬ್ಬ ಪುಟ್ಟ ಪೋರ ಅದನ್ನು ಸುಳ್ಳು ಮಾಡಿದ್ದಾನೆ.
ಈತ ಮಾಡಿರುವ ಕಾರ್ಯವನ್ನು ಕಂಡಾಗ ಯಾರಿಗಾದರೂ ಮಾನವೀಯತೆ ಇನ್ನೂ ಜೀವಂತವಿದೆ ಎಂಬ ಉದ್ಗಾರ ಖಂಡಿತಾ ಬಂದೇ ಬರುತ್ತದೆ.
ಕಳೆದ ಶನಿವಾರ ಮಧ್ಯಾಹ್ನ 1.30ರ ವೇಳೆಗೆ ನಗರದ ಕೊಟ್ಟಾರ ಪ್ರದೇಶದ ಮಾಲೆಮಾರ್ ರಸ್ತೆಯಲ್ಲಿ ಬೀದಿನಾಯಿಯೊಂದು ವಾಹನಗಳ ಓಡಾಟಗಳ ಮಧ್ಯೆ ರಸ್ತೆ ದಾಟಲು ಹವಣಿಸುತ್ತಿತ್ತು. ಆಗ ಸೈಕಲ್‌ನಲ್ಲಿ ತರಕಾರಿ ಮಾರಿಕೊಂಡು ಹೋಗುತ್ತಿದ್ದ ಬಾಲಕ ಅದೇ ರಸ್ತೆಯಲ್ಲಿ ಬಂದಿದ್ದು, ಈ ನಾಯಿಯನ್ನು ಗಮನಿಸಿದ್ದಾನೆ.
ತಕ್ಷಣ ನಾಯಿಯ ಬಳಿಗೆ ಬಂದು ಅದರ ಮುಂಭಾಗದ ಎರಡೂ ಕಾಲುಗಳನ್ನು ಅನಾಮತ್ತಾಗಿ ಎತ್ತಿಕೊಂಡಿದ್ದಾನೆ. ಒಂದು ಕೈಯಲ್ಲಿ ಸೈಕಲ್ ಬ್ಯಾಲೆನ್ಸ್ ಮಾಡಿಕೊಂಡು ಅನತಿ ದೂರದವರೆಗೆ ಕರೆದೊಯ್ದು ರಸ್ತೆ ದಾಟಿಸಿದ. ನಾಯಿಯೂ ಆರಾಮವಾಗಿ ಹಿಂಭಾಗದ ಎರಡು ಕಾಲಿನಲ್ಲಿ ಅವನೊಂದಿಗೆ ಹೋಗಿದೆ. ಆ ಬಳಿಕ ನಾಯಿ ತನ್ನ ಪಾಡಿಗೆ ಓಡಿದೆ, ಬಾಲಕ ಸೈಕಲ್ ಏರಿ ತರಕಾರಿ ಮಾರಾಟಕ್ಕೆ ಹೊರಟು ಹೋಗಿದ್ದಾನೆ.
ಈ ಎಲ್ಲಾ ದೃಶ್ಯವನ್ನು ಅಲ್ಲೇ ಇದ್ದ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಅಪುಲ್ ಆಳ್ವ ಇರಾ ಅವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಬರೀ 7 ಸೆಕೆಂಡ್‌ಗಳ ಈ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಪುಟ್ಟ ಪೋರನ ಈ ಪ್ರಾಣಿ ಪ್ರೀತಿಗೆ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ. ಬಾಲಕನ ಈ ಮಾನವೀಯ ನಡೆಯು ಸಾಕಷ್ಟು ಜನರ ಕಣ್ಣು ತೆರೆಸಿದ್ದಂತೂ ಸತ್ಯ.