ಮಂಗಳೂರು: ಮಂಗಳೂರಿನಲ್ಲಿ ದೇಶದ ಎರಡನೇ ಆಯುಷ್ ಸ್ಪೋರ್ಟ್ಸ್ ಮೆಡಿಕಲ್ ಸೆಂಟರ್ನ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಆಯುಷ್ ಸಚಿವಾಲಯದಿಂದ ಮಂಗಳೂರಿಗೆ ಆಯುಷ್ ಸ್ಪೋರ್ಟ್ಸ್ ಮೆಡಿಕಲ್ ಸೆಂಟರ್ ಮಂಜೂರಾಗಿದ್ದು, ಇದು ದೇಶದ ಎರಡನೇ ಸ್ಪೋರ್ಟ್ಸ್ ಮೆಡಿಕಲ್ ಸೆಂಟರ್ ಆಗಿರಲಿದೆ.
ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿರುವ ಆಯುಷ್ ಅಧಿಕಾರಿ ಡಾ ಇಕ್ಬಾಲ್ , ಮಂಗಳೂರಿನಲ್ಲಿ ಆಯುಷ್ ಸ್ಪೋರ್ಟ್ಸ್ ಮೆಡಿಕಲ್ ಸೆಂಟರ್ ಮಾಡುವ ಬಗ್ಗೆ ಕಳೆದ ಎರಡೂವರೆ ವರ್ಷದ ಹಿಂದೆಯೇ ಕೇಂದ್ರಕ್ಕೆ ವಿಸ್ತೃತ ಯೋಜನಾ ವರದಿಯೊಂದನ್ನು ಕಳುಹಿಸಲಾಗಿತ್ತು. ಇದೀಗ ಆಯುಷ್ ಮಂತ್ರಾಲಯದಿಂದ ಮೆಡಿಕಲ್ ಸೆಂಟರ್ ಮಂಜೂರು ಆಗಿದೆ. ಈಗಾಗಲೇ ಕೇರಳದ ತ್ರಿಶೂರ್ ನಲ್ಲಿ ಆಯುರ್ವೇದ ಸ್ಪೋರ್ಟ್ಸ್ ಮೆಡಿಕಲ್ ಸೆಂಟರ್ ಇದ್ದು, ಮಂಗಳೂರಿಗೆ ಮಂಜೂರಾಗಿರುವ ಮೆಡಿಕಲ್ ಸೆಂಟರ್ ಕರ್ನಾಟಕದ ಮೊದಲ ಆಯುಷ್ ಮೆಡಿಕಲ್ ಸೆಂಟರ್ ಆಗಿದೆ. ಇಲ್ಲಿ ಆಯುಷ್ ನ ಐದು ವಿಭಾಗಗಳಲ್ಲಿ ಚಿಕಿತ್ಸೆ ನಡೆಯಲಿದೆ ಎಂದು ಡಾ ಇಕ್ಬಾಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ನಿರ್ಮಾಣವಾಗುವ ಆಯುಷ್ ಮೆಡಿಕಲ್ ಸೆಂಟರ್ ಗೆ ಕೇಂದ್ರ ಸರಕಾರವು ಎರಡೂವರೆ ಕೋಟಿ ಹಣ ಮಂಜೂರು ಮಾಡಿದ್ದು, 25 ಸಿಬ್ಬಂದಿಗಳ ನೇಮಕಕ್ಕೆ ಸೂಚಿಸಿದೆ. ಈ ಸೆಂಟರ್ ಗಳು ವಿಶ್ವದರ್ಜೆಯ ಕ್ರೀಡಾಪಟುಗಳ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಈ ಸೆಂಟರ್ಗಳ ಮೂಲಕ ಕ್ರೀಡಾಪಟುಗಳ ಆರೋಗ್ಯ, ಫಿಟ್ನೆಸ್ ಕಾಪಾಡುವುದು, ಆತ್ಮವಿಶ್ವಾಸ, ಮಾನಸಿಕ ದೃಢತೆಯನ್ನು ಹೆಚ್ಚಿಸುವ ಕಾರ್ಯವಾಗಲಿದೆ. ಆಟದ ವೇಳೆ ಉಂಟಾಗುವ ಗಾಯಗಳಿಗೆ ಆಯುಷ್ ಚಿಕಿತ್ಸೆ ಪರಿಣಾಮಕಾರಿಯಾಗಿದ್ದು, ಎಲ್ಲ ಬಗೆಯ ಥೆರಪಿಗಳು ಈ ಸೆಂಟರ್ ನಲ್ಲಿ ಲಭ್ಯವಿರಲಿದೆ. ಈ ಸೆಂಟರ್ ಶೀಘ್ರದಲ್ಲೇ ಆರಂಭವಾಗಲಿದ್ದು, ಸುಸಜ್ಜಿತ ಕಟ್ಟಡದಲ್ಲಿ ಎರಡು ವರ್ಷದೊಳಗೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಓದಿ : ಪಿಎಸ್ಐ ಪರೀಕ್ಷೆ ಅಕ್ರಮ: ಮೊಬೈಲ್ ಒಡೆದು ಸಾಕ್ಷ್ಯ ನಾಶ ಪಡಿಸಿರುವ ದಿವ್ಯಾ