ಹೈವೋಲ್ಟೇಜ್ ಕಣವಾದ ಗುಲ್ಬರ್ಗ ಲೋಕಸಭೆ ಚುನಾವಣೆ ಮತದಾನ ಮುಗಿದು ಈಗ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೈಟೆನ್ಶನ್ ಕದನದ ಬಳಿಕ ಸೋಲು ಗೆಲುವಿನ ಲೆಕ್ಕಾಚಾರ ಜೋರಾಗೇ ಇದೆ. ಇನ್ನೇನು ಫಲಿತಾಂಶ ಹೊರ ಬೀಳುತ್ತಿದೆ. ಖರ್ಗೆ ಮತ್ತೊಮ್ಮೆ ಗೆದ್ದು ಅಜೇಯರಾಗಿ ಉಳೀತಾರಾ. ಇಲ್ಲ ಇವರ ಗೆಲುವಿನ ನಾಗಾಲೋಟಕ್ಕೆ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ತಡೆಯೊಡ್ಡುತ್ತಾರಾ ಎಂಬುದು ಇನ್ನೇನು ಗೊತ್ತಾಗಲಿದೆ.
ಸೋಲಿಲ್ಲದ ಸರದಾರನಿಗೆ ಸೋಲುಣಿಸ್ತಾರಾ ಜಾಧವ್ ?
ಪ್ರತಿಷ್ಠೆಯ ಕಣವಾಗಿದ್ದ ಗುಲ್ಬರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸೋಲಿಲ್ಲದ ಸರದಾರ ಕೇಂದ್ರ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದರೆ, ಕಾಂಗ್ರೆಸ್ ಶಾಸಕರಾಗಿದ್ದ ಉಮೇಶ ಜಾಧವ್ ರಾಜೀನಾಮೆ ನೀಡಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಒಂದು ಕಾಲದ ಗುರು- ಶಿಷ್ಯರೇ ಈಗ ಬದ್ಧ ಎದುರಾಳಿಗಳು. ಹೀಗಾಗಿ ಈ ಕ್ಷೇತ್ರ ಭಾರೀ ಕುತೂಹಲ ಕೆರಳಿಸಿದೆ. ಈಗಾಗಲೇ ಮತದಾನ ಮುಗಿದಿದ್ದು ಇಬ್ಬರು ನಾಯಕರ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಈಗ ಜನರು ಸೋಲು ಗೆಲುವಿನ ಲೆಕ್ಕಾಚಾರ ಹಾಕಿದ್ದಾರೆ. ಕೆಲವೇ ಹೊತ್ತಲ್ಲಿ ಫಲಿತಾಂಶವೂ ಬರುತ್ತೆ. ಕುತೂಹಲಕ್ಕೆ ತೆರೆ ಬೀಳುತ್ತೆ.
ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಿರುವುದು ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿನ ಮತ ನೀರಿಕ್ಷೆ ಮಾಡಲಾಗುತ್ತಿದೆ. ಉತ್ತರ ಕ್ಷೇತ್ರದಲ್ಲಿ 1,57,029 (ಶೇ.56.89) ಮತಚಲಾವಣೆಯಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ 25 ಸಾವಿರ ಮತಗಳ ಲೀಡ್ ಸಿಗುವ ಸಾಧ್ಯತೆಗಳಿವೆ.
ಮೊದಲಿದ್ದ ಹುಮ್ಮಸ್ಸು ಕೊನೆಗೆ ಕಳೆದುಕೊಂಡ್ರಾ ಜಾಧವ್?
ಕಲಬುರಗಿ ಗ್ರಾಮೀಣದಲ್ಲಿ ಬಿಜೆಪಿ ಶಾಸಕರಿದ್ದರೂ ಬಿಜೆಪಿಯಿಂದ ಗಣನೀಯ ಪ್ರಚಾರ ನಡೆದಿಲ್ಲ ಎಂಬ ಮಾತಿದೆ. ಮೇಲಾಗಿ ಎಸ್ಸಿ ಮಿಸಲು ಕ್ಷೇತ್ರವಾದರಿಂದ ಎಸ್ಸಿ ಮತದಾರರ ಬಲ ಹೆಚ್ಚಿದೆ. ದಲಿತ ಸಮುದಾಯಕ್ಕೆ ಸೇರಿದ ಖರ್ಗೆ ಅವರಿಗೆ ಹೆಚ್ಚಿನ ಬಲ ಸಿಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಬಿಜೆಪಿಯವರಿಗೆ ಆರಂಭದಲ್ಲಿದ್ದ ಉತ್ಸಾಹ ಕೊನೆಗಳಿಗೆಯಲ್ಲಿ ಕಾಣಲಿಲ್ಲ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಟಫ್ ಆಗಿದ್ದ ಕಾಂಪಿಟೇಶನ್ ಕೊನೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾತಾವರಣ ನಿರ್ಮಿಸಿ ಕೊಟ್ಟಿದೆ ಎಂಬ ಮಾತಿದೆ.
ಜಿದ್ದಾಜಿದ್ದಿ ಫೈಟ್ ಅಂತೂ ಇದೆ!
ಸೋಲರಿಯದ ಸರದಾರ ಮಲ್ಲಿಕಾರ್ಜುನ್ ಖರ್ಗೆ ಅವರ ಜೈತ್ರಯಾತ್ರೆ ಮುಂದುವರಿಯಲಿದೆ ಎಂಬ ಲೆಕ್ಕಾಚಾರದ ಸಮೀಕ್ಷೆಗಳು ಜನರ ಬಾಯಲ್ಲಿ ಹರಿದಾಡುತ್ತಿವೆ. ಇಲ್ಲಿ ಇನ್ನೊಂದು ಗಮನಾರ್ಹ ವಿಷಯ ಅಂದ್ರೆ ಬಂಜಾರ ಸಮುದಾಯದ ಉಮೇಶ ಜಾಧವ್ ತಮ್ಮ ಸಮುದಾಯದ ಮತಗಳನ್ನು ಕ್ರೂಡಿಕರಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಇದನ್ನು ಕಂಡ ದಲಿತ ಸಮುದಾಯವರು ತಮ್ಮ ಒಳಬೇಗುದಿ ಮರೆತು ತಮ್ಮ ಸಮುದಾಯದ ಖರ್ಗೆ ಪರವಾಗಿ ಮತಗಳನ್ನು ಕ್ರೂಡಿಕರಿಸಿದ್ದು, ಜಾಧವ ಅವರಿಗೆ ಪೆಟ್ಟು ಬೀಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗುತ್ತಿದೆ. ಒಟ್ಟಾರೆ ಈ ವಿಶ್ಲೇಷಣೆಯ ಎಷ್ಟರ ಮಟ್ಟಿಗೆ ಸತ್ಯವಾಗಲಿದೆ. ಯಾವ ಅಭ್ಯರ್ಥಿಗೆ ವಿಜಯದ ಮಾಲೆ ಕೊರಳಿಗೆ ಬೀಳಲಿದೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.