ಕಲಬುರಗಿ: ಭೀಮಾ ನದಿ ಉಕ್ಕಿ ಹರಿಯುತ್ತಿದ್ದು ಹಲವೆಡೆ ನದಿ ನೀರಿನ ಅಬ್ಬರಕ್ಕೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಈ ನದಿಗೆ ಹೊಂದಿಕೊಂಡಿರುವ ಸನ್ನತ್ತಿಯ ಕನಗನಹಳ್ಳಿ ಗ್ರಾಮದ ಐತಿಹಾಸಿಕ ಬೌದ್ಧ ಸ್ತೂಪ ನೆಲೆ ಸಹ ಈಗ ಜಲಾವೃತಗೊಂಡಿದೆ.
ಮೌರ್ಯ ಸಾಮ್ರಾಜ್ಯದ ದೊರೆ ಸಾಮ್ರಾಟ್ ಅಶೋಕನ ಕಾಲದ ಬೌದ್ಧ ಸ್ತೂಪ, ಶಿಲ್ಪಕಲೆಗಳು, ಬುದ್ಧ ವಿಹಾರ, ಬುದ್ಧನ ಮೂರ್ತಿಗಳು, ಪಾಲಿ ಭಾಷೆಯ ಶಿಲಾ ಶಾಸನ ಸೇರಿ ಬೌದ್ಧ ಕುರುಹುಗಳು ನೀರನಲ್ಲಿ ಮುಳುಗಿವೆ. ರಾಜ್ಯ ಸೇರಿದಂತೆ ದೇಶದ ಪ್ರಖ್ಯಾತ ಸಾಹಿತಿಗಳು, ಬರಹಗಾರರು, ಇತಿಹಾಸಕಾರರು ಪ್ರವಾಸಿಗರು ಸನ್ನತಿಗೆ ಭೇಟಿ ನೀಡಿ ಈ ಐತಿಹಾಸಿಕ ಬೌದ್ಧ ನೆಲೆಯನ್ನು ಕಣ್ತುಂಬಿಕೊಳ್ಳುತ್ತಾರೆ.
ಬುದ್ಧನ ಶಾಂತಿ ಸಾರುವ ಐತಿಹಾಸಿಕ ತಾಣವನ್ನೀಹ ಪ್ರವಾಹದ ನೀರು ಸುತ್ತುವರೆದಿದ್ದು ಬೌದ್ಧ ಕುರುಹುಗಳ ನಶಿಸಿ ಹೋಗುತ್ತವೆ ಎಂಬ ಆತಂಕ ಮನೆಮಾಡಿದೆ. ಪ್ರಾಚ್ಯವಸ್ತು ಇಲಾಖೆಯ ಸಿಬ್ಬಂದಿ ಸಂರಕ್ಷಣೆ ಕಾರ್ಯದಲ್ಲಿ ತೊಡಗಿದ್ದು, ಶಿಲೆ, ಶಾಸನಗಳಿಗೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.