ಕಲಬುರಗಿ : ಈ ಹಿಂದೆ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕಲಬುರಗಿ ಮಹಾನಗರ ಪಾಲಿಕೆಯ ಉರ್ದು ನಾಮಫಲಕ ತೆರವುಗೊಳಿಸುವಂತೆ ಕನ್ನಡ ಅಭಿವೃದ್ದಿ ಪ್ರಾಧಿಕಾರ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದೆ.
ನಾಮಪತ್ರ ತೆರವುಗೊಳಿಸುವ ಕುರಿತು ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿರುವ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು, ಉರ್ದು ನಾಮಫಲಕವನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದೆ. ಸರ್ಕಾರಿ ಕಚೇರಿ ಹಾಗೂ ಸಂಸ್ಥೆಯ ಕಟ್ಟಡಗಳ ಮೇಲೆ ಕನ್ನಡವನ್ನು ಹೊರತುಪಡಿಸಿ ಅನ್ಯ ಭಾಷೆಯ ನಾಮಫಲಕ ಅಳವಡಿಸಕೂಡದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ಹಿಂದೆ ನಾಮಫಲಕ ತೆರುವುಗೊಳಿಸಿದ್ದಾಗ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಹಲವು ಮುಸ್ಲಿಂ ಸಂಘಟನೆಗಳು ರಸ್ತೆಗಿಳಿದು ಹೋರಾಟ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಕನ್ನಡ ಪರ ಸಂಘಟನೆಗಳು ಸಹ ಉರ್ದು ನಾಮಫಲಕ ತೆರವುಗೊಳಿಸುವಂತೆ ಪ್ರತಿಭಟನೆ ನಡೆಸಿದ್ದವು. ಪರ-ವಿರೋಧ ನಡುವೆಯೂ ಮತ್ತೆ ಉರ್ದು ನಾಮಫಲಕವನ್ನು ಅಳವಡಿಕೆ ಮಾಡಲಾಗಿತ್ತು. ಇದೀಗ ಮತ್ತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಉರ್ದು ನಾಮಫಲಕವನ್ನು ತೆರವುಗೊಳಿಸಲು ಆದೇಶಿಸಿದ್ದು, ಮತ್ತೆ ವಿವಾದಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ : ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರ ವರ್ಗಾವಣೆ : ಸಾರ್ವಜನಿಕರ ಆಕ್ರೋಶ