ಕಲಬುರಗಿ: ಗೂಡ್ಸ್ ವಾಹನ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಎರಡು ವಾಹನಗಳ ಚಾಲಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಆಳಂದ ತಾಲೂಕಿನ ಚಿತಲಿ ಗ್ರಾಮದ ಬಳಿ ನಡೆದಿದೆ. ಆಳಂದ ಪಟ್ಟಣದ ಬಾಳೇನಗಲ್ಲಿ ನಿವಾಸಿ, ಗೂಡ್ಸ್ ಚಾಲಕ ಜಾಫರ್ ಖಾಸೀಂ (27), ಗುಜರಾತ್ ಮೂಲದ ಉದ್ಯಮಿ ಕಾರು ಚಾಲಕ ಜೋಧಾರಾಮ ಜಸ್ವಂತ್ (40) ಮೃತರು. ಕಾರಿನಲ್ಲಿದ್ದ ಇನ್ನೊಬ್ಬ ಹೀರಾರಾಮ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಲಕ ಜಾಫರ್ ಆಳಂದದಿಂದ ಮಹಾರಾಷ್ಟ್ರದ ಉಮರ್ಗಾಕ್ಕೆ ಗೂಡ್ಸ್ ವಾಹನದಲ್ಲಿ ತೆರಳುತ್ತಿದ್ದ. ಗುಜರಾತ್ ಮೂಲದ ವ್ಯಾಪಾರಿಗಳಾದ ಜೋಧಾರಾಮ, ಹೀರಾರಾಮ ಉಮರ್ಗಾದಿಂದ ಕಾರಿನಲ್ಲಿ ಆಳಂದಕ್ಕೆ ಬರುತ್ತಿರುವಾಗ ಘಟನೆ ಸಂಭವಿಸಿದೆ. ಸ್ಥಳಕ್ಕೆ ಸಿಪಿಐ ಬಾಸು ಚವ್ಹಾಣ್, ಪಿಎಸ್‌ಐ ತಿರುಮಲೇಶ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![ಅಪಘಾತ](https://etvbharatimages.akamaized.net/etvbharat/prod-images/kn-klb-01-accident-business-man-death-ka10050_30062022101709_3006f_1656564429_411.jpg)
(ಇದನ್ನೂ ಓದಿ: ಭೀಕರ ಅಪಘಾತ: ಕೃಷಿ ಕೆಲಸಕ್ಕೆ ಆಟೋದಲ್ಲಿ ಹೋಗುತ್ತಿದ್ದ 5 ಮಂದಿ ಸಜೀವ ದಹನ)